ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ, ಗುಣಲಕ್ಷಣಗಳನ್ನು ನೋಡಿದರೆ ಎತ್ತಿನಗಾಡಿಗೂ ಇಲ್ಲಿ ಸಂಚಾರ ಕಷ್ಟ!
ಸ್ಥಳೀಯ ಜನರು ಪೇಟೆಯೊಳಗೆ ಬರಬೇಕೆಂದಿದ್ದರೆ ಇರುವ ಒಂದೇ ಆಸರೆ ಸರ್ವೀಸ್ ರಸ್ತೆ. ಯಾವ ಘಳಿಗೆ, ಮುಹೂರ್ತದಲ್ಲಿ ಇದು ನಿರ್ಮಾಣವಾಯಿತೋ , ಅಂದಿನಿಂದ ಪ್ರತಿದಿನವೂ ಸರ್ವೀಸ್ ರಸ್ತೆ ಎಂದರೆ ಸಮಸ್ಯೆಗೆ ಇನ್ನೊಂದು ಹೆಸರು ಎಂಬಂತಾಯಿತು.
ಹೆಜ್ಜೆ ಹೆಜ್ಜೆಯಲ್ಲೂ ಹೊಂಡಗಳು, ಆರಂಭದಿಂದ ಅಂತ್ಯದವರೆಗೂ ಎಡಬಲಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ ಬಿ.ಸಿ.ರೋಡ್ ಸರ್ವೀಸ್ ರೋಡ್.
ಇನ್ನೂ ರಸ್ತೆಗೆ ತಾಗಿಕೊಂಡೇ ವಿದ್ಯುತ್ ಕಂಬವಿದೆ. ಫ್ಲೈಓವರ್ ಗೆ ತಾಗಿಕೊಂಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಕಾರ ಚರಂಡಿ ಅಗೆಯುವ ಕಾಮಗಾರಿ ನಡೆಸುತ್ತಿದೆ. ಅದೂ ಪೂರ್ತಿ ಆಗಿಲ್ಲ. ಮಂಗಳೂರಿಗೆ ತೆರಳುವ ಬಸ್ಸುಗಳು ಸರಿಯಾಗಿ ನಿಲ್ಲಲೂ ಜಾಗ ಇಲ್ಲ. ಇನ್ನು ಪ್ರಯಾಣಿಕರು ನಿಲ್ಲುವುದು ದೂರದ ಮಾತು. ಬಸ್ಸುಗಳು ಕೆಲವೊಮ್ಮೆ ರಸ್ತೆ ಮಧ್ಯದಲ್ಲೇ ನಿಲ್ಲುತ್ತವೆ. ಆಗ ವಾಹನಗಳು ಬಲಕ್ಕೆ ತೆರಳುವ ಪ್ರಯತ್ನ ಮಾಡುತ್ತವೆ. ಇದೇ ಸಂದರ್ಭ ಮುಚ್ಚಿದ ಚರಂಡಿಯ ಸ್ಲ್ಯಾಬ್ ಕಿತ್ತು ಹೋದದ್ದನ್ನು ಕಂಡು ವಾಹನಗಳು ಅಲ್ಲೇ ನಿಲ್ಲುತ್ತವೆ. ಮತ್ತೆ ಹಾರ್ನ್ ಸದ್ದು.
ವಿಪರ್ಯಾಸ ಎಂದರೆ ಫ್ಲೈಓವರ್ ನಲ್ಲಿ ವಾಹನಗಳು ತಿರುಗುವ ಜಾಗದಲ್ಲೇ ಸ್ಲ್ಯಾಬ್ ಒಂದು ಕಿತ್ತು ಹೋಗಿ ಕೆಲ ತಿಂಗಳುಗಳಾದವು. ಈ ಕುರಿತು ಸಾಕಷ್ಟು ಬಾರಿ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಿದವು. ಅಲ್ಲೇ ಪಕ್ಕ ನಿಲ್ಲುವವರು ಇದು ಮುನ್ಸಿಪಾಲಿಟಿಗೆ ಸಂಬಂಸಿದ್ದು ಎಂದುಕೊಳ್ಳುತ್ತಾರೆ. ಮುನ್ಸಿಪಾಲಿಟಿಯವರು ಇದು ರಾಷ್ಟ್ರಿಯ ಹೆದ್ದಾರಿ ಇಲಾಖೆ ಪ್ರಾಕಾರದ್ದು, ಅವರು ಮಾಡಬೇಕಾದ ಕೆಲಸ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಚರಂಡಿ ಸ್ಲ್ಯಾಬ್ ಮುಚ್ಚಳಕ್ಕೆ ಇನ್ನು ಪ್ರಧಾನಮಂತ್ರಿಗೇ ಪತ್ರ ಬರೆಯಬೇಕಾದೀತೋ ಏನೋ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
ಅಲ್ಲೇ ಪುಟ್ಟ ಮಕ್ಕಳು ಓಡಾಡುತ್ತಾರೆ. ಬಿ.ಸಿ.ರೋಡಿನ ಮುಖ್ಯ ಬಸ್ ನಿಲ್ದಾಣಕ್ಕೆ ಅದೇ ಜಾಗದಲ್ಲಿ ನಡೆದುಕೊಂಡು ಹೋಗಬೇಕು. ಅಲ್ಲಿ ಹೀಗಾಗಿ ತೆರೆದ ಮುಚ್ಚಳವನ್ನು ಸರಿಯಾಗಿ ಮುಚ್ಚಲು ಸಾರ್ವಜನಿಕರು ಮನವಿ ಮಾಡಿದ್ದಾರೆ. ಫಲಿತಾಂಶ ಶೂನ್ಯ. ಎನ್.ಎಚ್.ಎ.ಐ. ನಾವು ಕಾಮಗಾರಿ ಪೂರ್ತಿ ಮಾಡಿದ ಮೇಲೆ ನೋಡಿ, ಹೇಗೆ ನಳನಳಿಸುತ್ತದೆ ಬಿ.ಸಿ.ರೋಡಿನ ರೋಡ್ ಎಂದು ಹೇಳುತ್ತದೆ. ಆದರೆ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ನೋಡಿದರೆ ಮುಂದಿನ ಮಳೆಗಾಲ ಊಹಿಸಿದರೆ ಭಯಾನಕ ದಿನಗಳು ಎದುರಾಗಬಹುದು ಎಂಬ ಭೀತಿ ಕಾಡುತ್ತದೆ.
ಯಾವುದೇ ಕ್ಷಣದಲ್ಲೂ ಅಪಘಾತಕ್ಕೆ ಮುನ್ನುಡಿ ಬರೆಯುವಂಥ ಜಾಗ ಬಿ.ಸಿ.ರೋಡ್ ನ ಸರ್ವೀಸ್ ರಸ್ತೆ. ಫ್ಲೈಓವರ್ ಅಡಿಯಲ್ಲೇ ತರಕಾರಿ ಮಾಡುವ ಜನರು, ಅಲ್ಲೇ ತರಕಾರಿ ಕೊಳ್ಳಲು ನಿಂತ ವಾಹನಗಳು ರಸ್ತೆ ಸಂಚಾರಕ್ಕೆ ತೊಡಕು ಉಂಟುಮಾಡುತ್ತದೆ.
ಪದ್ಮಾ ಕಾಂಪ್ಲೆಕ್ಸ್ ಬಳಿಯಿಂದ ಭಾರತ್ ಬ್ಯಾಂಕ್ ವರೆಗಿನ ಕಟ್ಟಡದ ಜಾಗದವರೆಗಿನ ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೆಜ್ಜೆ ಹೆಜ್ಜೆಗೂ ಹೊಂಡಗಳು. ವಾಹನಗಳು ಆಯತಪ್ಪಿ ಬೀಳುವ ಪ್ರಸಂಗ, ಅಲ್ಲೇ ಮಣ್ಣು ಅಗೆದುಹಾಕಿ ತೊಂದರೆ ಜಾಸ್ತಿಯೇ ಆಗಿದೆ.
ಇದುವರೆಗೆ ಬಿ.ಸಿ.ರೋಡ್ ಸರ್ವೀಸ್ ರಸ್ತೆ ಈಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟುವ ಜಾಗದಿಂದ ಮುಂದೆವರೆಗೆ ಇತ್ತು. ಆದರೆ ಅಲ್ಲಿ ಕೆಲಸ ನಡೆಯುತ್ತಿರುವ ಕಾರಣ ಮೊದಲೇ ಮೊಟಕುಗೊಳಿಸಿ, ಬಲಕ್ಕೆ ವಾಹನಗಳನ್ನು ತಿರುಗಿಸಲಾಗುತ್ತಿದೆ. ಇಲ್ಲಿ ಇನ್ನೂ ಅಪಾಯ ಜಾಸ್ತಿ.
ಈ ಬೇಸಗೆಯ ನಾಲ್ಕು ತಿಂಗಳಿಂದ ಇಂಥ ಪರಿಸ್ಥಿತಿ ತಲೆದೋರಿದೆ. ಸರ್ವೀಸ್ ರಸ್ತೆ ಪಕ್ಕದ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಬರುತ್ತಿರುವವರು ಧೂಳು ತಿನ್ನಬೇಕಿದ್ದರೆ, ಅಂಗಡಿಯವರು ಮೂಗು ಮುಚ್ಚಿ ನಿಲ್ಲಬೇಕಾದಂಥ ಪರಿಸ್ಥಿತಿ.
ಸರ್ವೀಸ್ ರಸ್ತೆ ಪಾದಚಾರಿಗಳಿಗೆ ಇಲ್ಲವೇ?
ಅಸಲಿಗೆ ಸರ್ವೀಸ್ ರಸ್ತೆ ಎಂಬುದು ಇರುವುದೇ ಪಾದಚಾರಿಗಳು ಹಾಗೂ ತೀರಾ ಲಘು ವಾಹನಗಳು ಸಾಗಲು ಅನುಕೂಲ ಮಾಡಿಕೊಡಲು. ಆದರೆ ಇಲ್ಲಿ ಎಲ್ಲವೂ ಉಲ್ಟಾ. ಘನ ವಾಹನಗಳು ಹಾರ್ನ್ ಹಾಕುತ್ತಾ ಎಲ್ಲರನ್ನೂ ಬೆದರಿಸುತ್ತಾ ಸಾಗಿದರೆ ಸ್ಕೂಟರ್ ಇತ್ಯಾದಿಗಳೆಲ್ಲವೂ ಕಕ್ಕಾಬಿಕ್ಕಿಯಾಗಿಬಿಡುತ್ತವೆ. ರಸ್ತೆ ಬದಿಯ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವವರಷ್ಟೇ ಅಲ್ಲ, ಯಾರ್ಯಾರೋ ಅಲ್ಲೇ ತಮ್ಮ ಕಾರು, ಸ್ಕೂಟರ್ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಗೆ ತಮ್ಮ ಪಾಲು ನೀಡುತ್ತಾರೆ. ಪ್ರಶ್ನಿಸಲು ಹೋದವರನ್ನೇ ಕೇಳಲು ನೀವ್ಯಾರು ಎಂದು ಮರುಪ್ರಶ್ನೆ ಎಸೆದದ್ದೂ ಉಂಟು. ನಾರಾಯಣಗುರು ವೃತ್ತದಿಂದ ಬಿ.ಸಿ.ರೋಡ್ ನ ಮಂಗಳೂರು ಬಸ್ ನಿಲ್ಲುವ ಜಾಗಕ್ಕೆ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಬರಲು ಹಾಗೂ ಪದ್ಮಾ ಕಾಂಪ್ಲೆಕ್ಸ್ ಬದಿಯಿಂದ ಭಾರತ್ ಬ್ಯಾಂಕ್ ವರೆಗಿನ ಜಾಗದಲ್ಲಿ ನಡೆದಾಡಲು ಎಷ್ಟು ಧೈರ್ಯ ಇದ್ದರೂ ಸಾಲದು. ಮೃತ್ಯು ಯಾವ ಕಡೆ ಕಾದು ಕುಳಿತಿರುತ್ತದೆ ಎಂದು ಊಹಿಸಲೂ ಅಸಾಧ್ಯ. ಹೀಗಾಗಿ ಸರ್ವೀಸ್ ರಸ್ತೆ ಬಿ.ಸಿ.ರೋಡಿಗೆ ಸದ್ಯಕ್ಕಂತೂ ಶಾಪವಾಗಿ ಪರಿಣಮಿಸಿದೆ.
ವೆಂಕಟೇಶ್…
