ಬಂಟ್ವಾಳ: ಈಗ ಎಲ್ಲೆಡೆ ಶಾಲಾ ಮಕ್ಕಳಿಗೆ ಪರೀಕ್ಷೆಯ ಭರಾಟೆ. ಈ ಬಾರಿ ಪರೀಕ್ಷೆಗೆ ಕಠಿಣವಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸಿಸಿ ಟಿವಿಯಂತ ಕಣ್ಗಾವಲುಗಳು ಕೂಡಾ ಇರುತ್ತದೆ. ಆದರೆ ಮಕ್ಕಳು ಇದ್ಯಾವುದಕ್ಕೂ ಕಿವಿಗೊಡದೆ ಮತ್ತು ಪರೀಕ್ಷೆಗೆ ಆತಂಕಪಡಬೇಕಾಗಿಲ್ಲ.ರಾಜ್ಯಾದ್ಯಂತ 2016-17 ಸಾಲಿನ ಮಾ. 30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನಲ್ಲೂ ಶಿಕ್ಷಣ ಇಲಾಖೆ ಎಸೆಸೆಲ್ಸಿ ಪರೀಕ್ಷೆಗಳನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಮುಖ ಮಾರ್ಗಸೂಚಿಗಳನ್ನು ಅಳವಡಿಸಿದ್ದಾರೆ.ಬಂಟ್ವಾಳ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಿ, ಹಾಜರಾಗುವಂತೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಸೂಚನೆಗಳು ಆಯಾಯ ಶಾಲೆಗೆ ರವಾನೆಯಾಗಿದೆ.
16 ಕೇಂದ್ರಗಳು: ಬಂಟ್ವಾಳ ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿವೆ. ವಾಮದಪದವು ಮತ್ತು ವಗ್ಗ ಸ.ಪ.ಪೂ.ಕಾಲೇಜುಗಳಲ್ಲಿ 2 ಸ್ವತಂತ್ರ ಪರೀಕ್ಷಾ ಕೇಂದ್ರಗಳಿವೆ. 14 ಕ್ಲಸ್ಟರ್ ಕೇಂದ್ರಗಳಿವೆ. ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿದ್ದು ಒಟ್ಟು 6,137 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸರಕಾರಿ ಶಾಲೆಗಳಲ್ಲಿ ಒಟ್ಟು 2290 ಹೊಸ ವಿದ್ಯಾರ್ಥಿಗಳಿದ್ದು, 1035 ಹುಡುಗರು ಮತ್ತು 1055 ಹುಡುಗಿಯರು ಪರೀಕ್ಷಾರ್ಥಿಗಳಾಗಿದ್ದಾರೆ. 169 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 141 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 1271 ಹುಡುಗರು ಮತ್ತು 1329 ಹುಡುಗಿಯರು ಸೇರಿ 2600 ವಿದ್ಯಾರ್ಥಿಗಳಿದ್ದಾರೆ.ಅನುದಾನಿತ ಶಾಲೆಗಳಲ್ಲಿ 864 ಹುಡುಗರು ಮತ್ತು 946 ಹುಡುಗಿಯರಿದ್ದು ಒಟ್ಟು 1810 ಹೊಸ ವಿದ್ಯಾರ್ಥಿಗಳಿದ್ದಾರೆ. 192 ಹುಡುಗರು ಮತ್ತು 78 ಹುಡುಗಿಯರು ಒಟ್ಟು 270 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 6 ಹುಡುಗರು ಮತ್ತು ಓರ್ವ ವಿದ್ಯಾರ್ಥಿನಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2087 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 688 ಹುಡುಗರು ಮತ್ತು 713 ಹುಡುಗಿಯರಿದ್ದು ಒಟ್ಟು 1397 ಹೊಸ ವಿದ್ಯಾರ್ಥಿಗಳಿದ್ದಾರೆ. 20 ಹುಡುಗರು ಮತ್ತು 4 ಹುಡುಗಿಯರು ಒಟ್ಟು 24 ಪುನರಾವರ್ತಿತ ವಿದ್ಯಾರ್ಥಿಗಳಿದ್ದು ಒಟ್ಟು 1421 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಸಲಹೆ ಸೂಚನೆ ಮಾರ್ಗದರ್ಶಿ :
ಕಳೆದ ಅ.29ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದ್ದು ಪರೀಕ್ಷಾ ಕೇಂದ್ರಗಳ ಮೂಲಭೂತ ಸೌಲಭ್ಯಗಳು ಹಾಗೂ ಉತ್ತಮ ಫಲಿತಾಂಶ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು, ಜಿಲ್ಲಾ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರು (ಅಭಿವೃದ್ಧಿ), ಡಯಟ್, ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಪ್ರೌಢ ಶಿಕ್ಷಣ ಪರೀಕ್ಷಾ ಅಧಿಕಾರಿಗಳು, ವಿಷಯ ಪರಿವೀಕ್ಷಕರು, ಡಯಟ್ ಉಪನ್ಯಾಸಕರು, ತಾಲೂಕು ಹಂತದ ಶಿಕ್ಷಣ ಸಂಯೋಜಕರು, ಶಿಕ್ಷಕರ ಸಂಘದ ಎಲ್ಲಾ ಪ್ರತಿನಿಧಿಗಳು – ತಾಲೂಕಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಉನ್ನತೀಕರಣಕ್ಕಾಗಿ ಹಾಗೂ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸುತ್ತಿದ್ದಾರೆ.
ವಿಷಯವಾರು ಶಿಕ್ಷಕರ ಕೊರತೆಯಿದ್ದ ಶಾಲೆಗಳನ್ನು ಈಗಾಗಲೇ ಗುರುತಿಸಿ ಪರೀಕ್ಷಾ ತಯಾರಿಗೆ ಪೂರಕವಾಗುವಂತೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹತ್ತಿರದ ಶಾಲೆಗಳಿಂದ 16 ಶಿಕ್ಷಕರನ್ನು ಕೊರತೆಯಿರುವ ಶಾಲೆಗಳಿಗೆ ನಿಯೋಜಿಸಿದ್ದಾರೆ.
ಬಂಟ್ವಾಳ ತಾಲೂಕಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಉನ್ನತೀಕರಣಕ್ಕಾಗಿ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ವಿಷಯವಾರು 6 ಕಾರ್ಯಾಗಾರಗಳನ್ನು ಮತ್ತು ಈ ಬಗ್ಗೆ 8 ಮುಖ್ಯಶಿಕ್ಷಕರ ಸಭೆಗಳನ್ನು ಆಯೋಜಿಸಿ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಶಿಕ್ಷಕರಿಗೆ ವಿಷಯವಾರು 6 ಕಾರ್ಯಾಗಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಒಂದು ದಿನದ ಕಾರ್ಯಾಗಾರ, ವೆನ್ಲಾಕ್ ಆಸ್ಪತ್ರೆಯ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಯೋಜಕರೊಂದಿಗೆ ಶಾಲಾ ಭೇಟಿ ಮಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಮಾಲೋಚನೆ ಮತ್ತು ಸಂವಾದ ನಡೆಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಾಗಿ ಆರು ತಾಲೂಕು ಮಟ್ಟದ ಕಾರ್ಯಗಾರಗಳನ್ನು ಅಯೋಜಿಸಿ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗಿದೆ.
ತಾಲೂಕಿನ 16 ಪರೀಕ್ಷಾ ಕೇಂದ್ರಗಳಿಗೆ 16 ಕೇಂದ್ರ ಅಧೀಕ್ಷಕರು, 10 ಉಪ ಅಧೀಕ್ಷಕರು, 16 ಪ್ರಶ್ನೆ ಪತ್ರಿಕೆ ಅಧಿಕ್ಷಕರು, 16 ಸ್ಥಾನಿಕ ವೀಕ್ಷಕರು, ಒಟ್ಟು ಆರು ಮಾರ್ಗಗಳಿಗೆ ಆರು ಮಾರ್ಗಾಧಿಕಾರಿಗಳನ್ನು ನೇಮಿಸಿದ್ದಾರೆ.
ಎಲ್ಲಾ ಪರೀಕ್ಷಾ ಕೇಂದ್ರಗಳ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆಯನ್ನು ಕಲ್ಪಿಸಲು ಸೂಚನೆ ನೀಡಿದ್ದು ಇದಕ್ಕಾಗಿ ಒಟ್ಟು 350 ಕೊಠಡಿ ಮೇಲ್ವಿಚಾರಕರನ್ನು ಅಂತರ್ ಕ್ಲಸ್ಟರ್ ಮಾದರಿಯಲ್ಲಿ ನೇಮಕ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅತೀ ಅಗತ್ಯದ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಮಾಡಲಾಗಿದೆ.ಪರೀಕ್ಷಾ ಕೇಂದ್ರದ ಸುತ್ತಮುತ್ತ ಮುಂಜಾಗೃತಾ ಕ್ರಮವಾಗಿ ಸೆಕ್ಷನ್ 144, ಸೂಕ್ತ ಪೊಲೀಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರತೀ ಪರೀಕ್ಷಾ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎ.ಎನ್.ಎಂ.ಗಳ ಮೂಲಕ ಕಲ್ಪಿಸಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿ, ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಲಾಗುತ್ತದೆ. ಪರೀಕ್ಷೆಯು ಪೂರ್ವಾಹ್ನ 9.30ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದೆ.
– ವೆಂಕಟೇಶ್ ಬಂಟ್ವಾಳ
ಬಂಟ್ವಾಳ ತಾಲೂಕಿನ ಸರಕಾರಿ,ಅನುದಾನಿತ ,ಅನುದಾನ ರಹಿತ ಪ್ರೌಢಶಾಲೆಗಳ ಶಾಲಾವಾರು, ವಿಷಯವಾರು, ಜಾತಿವಾರು 3 ವರ್ಷಗಳ ಎಸೆಸೆಲ್ಸಿ ವಾರ್ಷಿಕ, ಅರ್ಧ ವಾರ್ಷಿಕ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ನಡೆಸಲಾಗಿದ್ದು, ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ವಹಿಸಬೇಕಾದ ಕ್ರಮಗಳು, ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿಸಲು ಅಗತ್ಯ ಮಾರ್ಗದರ್ಶನ ನೀಡಲಾಗಿದೆ.
-ಲೋಕೇಶ್ ಸಿ.
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
