ಬಂಟ್ವಾಳ:ಅಜಿಲಮೊಗರುವಿನ ಕುಟ್ಟಿಕಳದಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ರಜತ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಾರ್ಚ್ 25ರಂದು ರಜತ ಮಹೋತ್ಸವ ಸಂಭ್ರಮಾಚರಣೆ ಶಾಲೆಯಲ್ಲಿ ನಡೆಯಲಿದೆ ಎಂದು ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಬೊಳ್ಳುಕಲ್ಲು ನಾರಾಯಣ ಪೂಜಾರಿ ಹೇಳಿದರು.ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಭವಿಷ್ಯದ ದೃಷ್ಟಿಯಿಂದ ಶಾಲೆಯ ಸರ್ವಾಂಗೀಣ ವಿಕಾಸದ ಪರಿಕಲ್ಪನೆಯನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಬಿ.ರಮಾನಾಥ ರೈ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಪಂ ಸದಸ್ಯ ಪದ್ಮಶೇಖರ ಜೈನ್, ತಾಪಂ ಸದಸ್ಯ ಬೇಬಿ ಕೃಷ್ಣಪ್ಪ, ಎಪಿಎಂಸಿ ಸದಸ್ಯ ಹರಿಶ್ಚಂದ್ರ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಎಪಿಎಂಸಿ ನಾಮನಿರ್ದೇಶಿತ ಸದಸ್ಯೆ ಕಾಂಚಲಾಕ್ಷಿ, ಬಿಇಒ ಲೋಕೇಶ್, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸಾಮಾಜಿಕ ಕಾರ್ಯಕರ್ತ ಹರಿಕೃಷ್ಣ ಬಂಟ್ವಾಳ್, ತಾಪಂ ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಎಲ್ಲೈಸಿ ಅಧಿಕಾರಿ ಮಧ್ವರಾಜ್, ಮಣಿನಾಲ್ಕೂರು ಸೇವಾ ಸಹಕಾರಿ ಸಂಘ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಐತಾಳ್ ಭಾಗವಹಿಸುವರು ಎಂದರು.
ಶಾಲೆಯಲ್ಲಿ ಒಟ್ಟು 134 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ವರ್ಷದಿಂದ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. 9ನೇ ಮತ್ತು 10ನೇ ತರಗತಿಯನ್ನು ಪ್ರಾರಂಭಿಸುವುದು ಹಾಗೂ ಎಲ್..ಕೆ.ಜಿ.ಯಿಂದ ಆಂಗ್ಲ ಮಾಧ್ಯಮದಲ್ಲಿ ಹತ್ತನೆ ತರಗತಿವರೆಗೆ ಶಿಕ್ಷಣ ಕೊಡುವುದು, ಸುಸಜ್ಜಿತ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ರೂಪಿಸುವ ಆಶಯ ನಮ್ಮದು ಎಂದು ಅವರು ಹೇಳಿದರು.
ಈ ಸಂದರ್ಭ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ, ರಜತಮಹೋತ್ಸವ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ ಮೊಗರುಮಜಲು, ಮುಖ್ಯ ಶಿಕ್ಷಕಿ ಗೀತಾಬಾಯಿ, ಶಿಕ್ಷಕರಾದ ರವಿಕುಮಾರ್ ಮತ್ತು ಜಗದೀಶ್ ಉಪಸ್ಥಿತರಿದ್ದರು.
