ಮೂಡುಬಿದಿರೆ: ಮೂಡುಬಿದಿರೆಯ 18 ಕೆರೆಗಳಲ್ಲಿ ಪಾಳು ಬಿದ್ದಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲವನ್ನು ಹೆಚ್ಚಿಸುವ ರೋಟೋಲೇಕ್ಸ್ ಯೋಜನೆಯನ್ನು ರೋಟರಿ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದು ಮೊಹಲ್ಲಾ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.
ರೋಟರಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ. ಮುರಳೀಕೃಷ್ಣ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಳೆದ ಬಾರಿಯೂ ಮೂಡುಬಿದಿರೆಯಲ್ಲಿ ಬರದ ಪರಿಸ್ಥಿತಿ ಉಂಟಾಗಿತ್ತು. ಈ ಬಾರಿಯೂ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಇಲ್ಲಿನ ಆಂತರಿಕ ಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಮಳೆನೀರು ಕೊಯ್ಲು ಆಂದೋಲನವನ್ನು ನಡೆಸುತ್ತಿದ್ದು ಈ ಕುರಿತು ಫ್ಲಂಬರ್‍ಗಳಿಗೆ ತರಬೇತಿ ನೀಡಲಾಗಿದೆ. ಇದು ರೋಟರಿಗಾಗಿ ಮಾಡುವ ಯೋಜನೆಯಾಗದೆ ಊರಿನ ಹಿತದೃಷ್ಠಿಯಿಂದ ಹಮ್ಮಿಕೊಂಡ ಕಾರ್ಯಕ್ರಮವಾಗಿದೆ. ಸ್ವಚ್ಛ ಭಾರತ ಯೋಜನೆಗೆ ಜನರು ಸಹಕರಿಸಿದ ಹಾಗೆ ಈ ಯೋಜನೆಗೂ ಸಹಕಾರ ನೀಡಬೇಕು ಎಂದರು.

mbd_march1_4
ಪುರಸಭಾ ಸದಸ್ಯ ಪಿ.ಕೆ. ಥೋಮಸ್ ಮಾತನಾಡಿ ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ರೋಟರಿಯು ಕಡಲಕೆರೆಯನ್ನು ಅಭಿವೃದ್ಧಿಪಡಿಸಿದ ಪರಿಣಾಮವಾಗಿ ಈಗ ಈ ಪರಿಸರದಲ್ಲಿ ಅಂತರ್‍ಜಲದ ಮಟ್ಟ ಹೆಚ್ಚಿದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಜಲ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಡಾ. ಎಲ್. ಸಿ. ಸೋನ್ಸ್, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಅಬ್ದುಲ್ ಬಶೀರ್, ರೋಟರಿ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಹರೀಶ್ ನಾಯಕ್, ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಸುದೀಪ್, ಇನ್ನಲ್ ವೀಲ್ ಕ್ಲಬ್‍ನ ಅಧ್ಯಕ್ಷೆ ಡಾ. ಸೀಮಾ ಸುದೀಪ್, ಸ್ಥಳೀಯರಾದ ಮಕ್ಬೂಲ್ ಹುಸೇನ್, ಖಾದರ್ ಸಾಹೇಬ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *