ಅಮ್ಟಾಡಿ: ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ಧೂಮಾವತಿ ಬಂಟ ಮತ್ತು ಪರಿವಾರ ದೈವಸ್ಥಾನವು ಪುನರ್ ನಿರ್ಮಾಣಗೊಂಡು
ಮಾ.1ರಿಂದ 5ರತನಕ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ.
ದೈವಸ್ಥಾನದಲ್ಲಿ ಈಗಾಗಲೇ ಅಂಗಣಕ್ಕೆ ಇಂಟರ್‍ಲಾಕ್ ಅಳವಡಿಸಲಾಗುತ್ತಿದ್ದು, ಭೋಜನಶಾಲೆ ನಿರ್ಮಾಣಗೊಳ್ಳುತ್ತಿದೆ. ಸುತ್ತುಗೋಪುರದಲ್ಲಿ ನೆಲಕ್ಕೆ ಗ್ರಾನೈಟ್ ಅಳವಡಿಕೆ, ಆಕರ್ಷಕ ಮೆಟ್ಟಿಲು, ದೈವದ ವಲಸರಿ ಗದ್ದೆಯಲ್ಲಿ ಶಿಲಾಮಯ ತುಳಸಿಕಟ್ಟೆ ಪ್ರತಿಷ್ಠಾಪನೆ, ದೈವದ ಭಂಡಾರ ಕೋಣೆಗೆ ಸೈರನ್‍ಸಹಿತ ಲಾಕರ್ ಅಳವಡಿಕೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದೆ.

ಮಾ.2ರಂದು ಮಧ್ಯಾಹ್ನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ, 3ರಂದು ಸಂಜೆ ‘ನೆಟ್‍ವರ್ಕ್ ತಿಕ್ಕುಜಿ’ ತುಳು ನಾಟಕ ಪ್ರದರ್ಶನ, 4ರಂದು ಬೆಳಿಗ್ಗೆ ಬಡಾಜೆಗುತ್ತುವಿನಿಂದ ಭಂಡಾರ ಮೆರವಣಿಗೆ, ಸಂಜೆ ಗಂಟೆ 5.30ರಿಂದ ಭಾಗವತ ಸತೀಶ್ ಪಟ್ಲ ಮತ್ತು ಬಳಗದಿಂದ ‘ಯಕ್ಷಗಾನ ನಾಟ್ಯವೈಭವ’ ಪ್ರದರ್ಶನಗೊಳ್ಳಲಿದೆ.
ಮಾ.3 ಮತ್ತು 4ರಂದು ಧಾರ್ಮಿಕ ಸಭೆ ನಡೆಯಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರ ಗಣ್ಯರು ಭಾಗವಹಿಸುವರು.
ಮಾ.5ರಂದು ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರವಿಶಂಕರ ಶೆಟ್ಟಿ ಬಡಾಜೆಗುತ್ತು ತಿಳಿಸಿದ್ದಾರೆ.
