ಮುಂಬಯಿ,: ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ವಿಜೇತ ಯುವ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರ ಕನ್ನಡ ಕವನ ಸಂಕಲನ `ಅಂತರಂಗದ ಮೃದಂಗ’ ಮತ್ತು ತುಳು ಕವನ ಸಂಕಲನ `ಮರಿಯಲದ ಮದಿಮಾಲ್’ ಎರಡು ಕೃತಿಗಳನ್ನು ಇದೇ ಬರುವ ಫೆ.19ನೇ ಆದಿತ್ಯವಾರ ಸಂಜೆ 5:00 ಗಂಟೆಗೆ ಮಾಟುಂಗಾ ಪೂರ್ವದ ಸೆಂಟ್ರಲ್ ರೈಲ್ವೇಯ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಬಿಡುಗಡೆ ಗೊಳಿಸಲಾಗುವುದು ಎಂದು ಕೃತಿಗಳ ಪ್ರಕಾಶಕರಾದ ಅಭಿಜಿತ್ ಪ್ರಕಾಶನ ಮುಂಬಯಿ ಇದರ ಡಾ| ಜಿ.ಎನ್ ಉಪಾಧ್ಯ ತಿಳಿಸಿದ್ದಾರೆ.
ಹಿರಿಯ ಲೇಖಕ, ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ, ಡಾ| ವ್ಯಾಸರಾವ್ ನಿಂಜೂರು ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಅಂತರಂಗದ ಮೃದಂಗ’ ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಮನೋಹರ ಎಂ.ಕೋರಿ ಬಿಡುಗಡೆ ಗೊಳಿಸಲಿದ್ದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕೃತಿ ಪರಿಚಯಿಸಲಿದ್ದು, `ಮರಿಯಲದ ಮದಿಮಾಲ್’ ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಗೌರವ ಕಾರ್ಯದರ್ಶಿ, ಕಥೆಗಾರ, ಪತ್ರಕರ್ತ, ಲೇಖಕ ಓಂದಾಸ್ ಕಣ್ಣಂಗಾರ್ ಅನಾವರಣ ಗೊಳಿಸಲಿದ್ದು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಕೃತಿ ವಿಮರ್ಶೆ ನಡೆಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ನಗರದ ಸರ್ವ ಕವಿ-ಕವಯತ್ರಿಯರು, ತುಳುಕನ್ನಡಾಭಿಮಾನಿಗಳು, ಸಾಹಿತ್ಯಾಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅನಿತಾ ಪಿ. ಪೂಜಾರಿ ತಾಕೋಡೆ ಈ ಮೂಲಕ ವಿನಂತಿಸಿದ್ದಾರೆ.

