ಬಂಟ್ವಾಳ:ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗುರುವಾರ ರಾತ್ರಿ ನಡೆದ ವಾರ್ಷಿಕ ಜಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಆರಂಭದಲ್ಲಿ ಇಲ್ಲಿನ ಗರಡಿಯಲ್ಲಿ ಬೈದರ್ಕಳರು ಒಲಿ ಮರೆಯಿಂದ ಹೊರಟು ಬಳಿಕ ಕೋಟಿ-ಚೆನ್ನಯ ಪಾತ್ರಿಗಳು ಸಹಿತ ಬ್ರಹ್ಮ ಬೈದರ್ಕಳರು ವಿಶಾಲವಾದ ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ಆಕರ್ಷಕವಾಗಿತ್ತು. ಇಲ್ಲಿನ ಎತ್ತರದಲ್ಲಿರುವ ಕೊಡಮಣಿತ್ತಾಯ ದೈವಸ್ಥಾನದಿಂದ ಇಳಿಜಾರು ಮೆಟ್ಟಿಲು ಮೂಲಕ ವಿಶಾಲವಾದ ಬಾಕಿಮಾರು ಗದ್ದೆಗೆ ಬ್ರಹ್ಮಬೈದರ್ಕಳರು ಇಳಿಯುವ ವೇಳೆ ಅಪಾರ ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೈವಗಳಿಗೆ ಹೂಹಾರ ಹಾಕಿ ಹರಕೆ ಸೇವೆ ಸಲ್ಲಿಸಿದರು. ತಡರಾತ್ರಿ ಬ್ರಹ್ಮರ ಬಲಿ, ಬೈದರ್ಕಳ ಪಾತ್ರಿಗಳು ಸುರ್ಯ ಹಾಕಿಕೊಂಡರು. (ಚೂಪಾದ ಖಡ್ಗದಿಂದ ಎದೆಗೆ ಗಂಧ ಹಚ್ಚಿ ಚುಚ್ಚಿಕೊಳ್ಳುವ ಪದ್ಧತಿ). ಇದೇ ವೇಳೆ ‘ಗಾನಭೂಷಣಂ’ ಕೆ.ವೆಂಕಟಕೃಷ್ಣ ಭಟ್ ಬಳಗದಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನಡೆಯಿತು. ಶುಕ್ರವಾರ ಮುಂಜಾನೆ ಮಾಯಂದಾತಿ ದೇವಿ ಉತ್ಸವ ನಡೆಯಿತು.

10btl-Baleshwar
ಆಡಳಿತ ಮೊಕ್ತೇಸರರಾದ ಚಂದನಾದೇವಿ ಡಾ.ಎನ್.ಪದ್ಮರಾಜ್ ಜೈನ್, ಬಿ.ಭರತ್ ಕುಮಾರ್ ಜೈನ್ ಪೀರ್ದಬೆಟ್ಟು ಗುತ್ತು, ರಘುಚಂದ್ರ ಚೌಟ ಬಾಲೇಶ್ವರಗುತ್ತು, ಕೋಟಿ ಪೂಜಾರಿ ಕೇಲ್ದೋಡಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟು ಮತ್ತಿತರ ಸಮಿತಿ ಪದಾಧಿಕಾರಿಗಳು ಇದ್ದರು. ಮಾಣಿಲ ಮೋಹನದಾಸ ಸ್ವಾಮೀಜಿ ಸಹಿತ ಅಪಾರ ಮಂದಿ ಭಕ್ತರು ಪಾಲ್ಗೊಂಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.
—

By Suddi9

Leave a Reply

Your email address will not be published. Required fields are marked *