ಬಂಟ್ವಾಳ: ರೈತರ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಡೆಸುತ್ತಿರುವ ಪೈಪೋಟಿ ನೈಜರೈತರನ್ನು ಕತ್ತಲಲ್ಲಿ ಇರಿಸಿದಂತೆ ಕಾಣುತ್ತಿದೆ. ತುಂಬೆ ವೆಂಟೆಡ್ ಡ್ಯಾಂ ನ ವಿಚಾರದಲ್ಲಿ ಕಾಂಗ್ರೇಸ್ ಬೆಂಬಲಿತ ಹಾಗೂ ಬಿಜೆಪಿ ಬೆಂಬಲಿತ ಎಂಬಂತೆ ಎರಡು ಹೋರಾಟ ಸಮಿತಿಗಳಿ ಕಾರ್ಯಾಚರಿಸುತ್ತಿದ್ದು, ರೈತರ ಹೆಸರಿನಲ್ಲಿ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ. ತುಂಬೆ ಡ್ಯಾಂ ಸಂತ್ರಸ್ಥರ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದ ಹೋರಾಟ ಸಮಿತಿಯೊಂದು ರೈತ ಸಂಘದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿತ್ತು. ಆದರೆ ಕಳೆದ ಕೆಲ ತಿಂಗಳ ಹಿಂದೆ ಈ ಹೋರಾಟ ಸಮಿತಿಯ ಲ್ಲಿದ್ದ ಕೆಲ ಪ್ರಭಾವಿ ರೈತರ ನಡುವೆ ಬಿರುಕು ಕಾಣೀಸಿಕೊಂಡಿತ್ತು. ಈ ನಡುವೆ ಹೋರಾಟ ಸಮಿತಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಪತ್ರಿಕಾ ಹೇಳಿಕೆ ನೀಡಿತ್ತಲ್ಲದೆ, ಪತ್ರಿಕಾ ಗೋಷ್ಠಿಯಲ್ಲಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿತ್ತು. ಈ ನಡುವೆ ಸಚಿವ ರೈ ನೆತೃತ್ವದಲ್ಲಿ ರೈತರ ನಿಯೋಗವೊಂದು ತುಂಬೆ ಡ್ಯಾಂ ವಿಚಾರದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿತ್ತು. ರೈತ ಸಂಘದ ಹೋರಾಟ ಸಮಿತಿಗೆ ಮಾಹಿತಿ ನೀಡಿದೆ ನಡೆದಿದ್ದ ಈ ಭೇಟಿ ಬಗ್ಗೆಯೂ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಎಲ್ಲಾ ವಿದ್ಯಮಾನಗಳ ಬೆನ್ನಲ್ಲೇ ಮೆಲ್ಕಾರ್ ನಲ್ಲಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ತುಂಬೆ ಡ್ಯಾಂ ಮುಳುಗಡೆ ಸಂತ್ರಸ್ತರ ಪರಿಹಾರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ತುಂಬೆ ಡ್ಯಾಂ ವಿಚಾರದಲ್ಲಿ ರೈತರ ಹೋರಾಟ ಸಮಿತಿ ಇಬ್ಬಾಗಗೊಂಡಂತಾಗಿದೆ. ಎರಡೂ ರಾಜಕೀಯ ಪಕ್ಷಗಳ ಆಟದಲ್ಲಿ ಇತ್ತ ನೈಜ ರೈತರು ಬೀದಿಪಾಲಾಗುವ ಲಕ್ಷಣಗಳು ಕಾಣೀಸಿಕೊಳ್ಳುತ್ತಿದ್ದು, ಪರಿಹಾರಕ್ಕಾಗಿ ನೇರ ಜಿಲ್ಲಾಧಿಕಾರಿಯವರನ್ನು ಕೋರುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
