ಬಿ.ಸಿ.ರೋಡು : ಇಲ್ಲಿನ ಫ್ಲೈ ಓವರ್ ಅಡಿಭಾಗದಲ್ಲಿ ಅನಧಿಕೃತವಾಗಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಟ್ರಾಫಿಕ್ ಪೊಲೀಸರು ತೆರವುಗೊಳಿಸಿ ದಂಡ ವಿಧಿಸಿದ ಘಟನೆ ಮಂಗಳವಾರ ನಡೆದಿದೆ. ಕಳೆದ ಕೆಲವು ತಿಂಗಳಿನಿಂದ ಬಿ.ಸಿ.ರೋಡಿನ ಫ್ಲೈ ಓವರ್ ಅಡಿಭಾಗ ಹಾಗೂ ಹೆದ್ದಾರಿ ಬದಿಗಳಲ್ಲಿ ಎಲ್ಲಿಂದಲೋ ಬಂದ ತರಕಾರಿ ವ್ಯಾಪಾರಸ್ಥರು ಇಲ್ಲಿನ ಪುರಸಭಾಡಳಿತದ ನಿಯಮವನ್ನು ಉಲ್ಲಂಘಿಸಿ ತರಕಾರಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ರಸ್ತೆ ಬದಿಯಲ್ಲಿ ತರಕಾರಿ ರಾಶಿ ಹಾಕಿ ವ್ಯಾಪಾರ ನಡೆಸುವುದರಿಂದ ಇಲ್ಲಿನ ಪಾದಾಚಾರಿಳಿಗೆ, ರಿಕ್ಷಾಚಾಲಕರಿಗೆ ಮುಖ್ಯ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ವಾಹನಗಳಲ್ಲಿ ಬರುವ ಮಂದಿ ಇಲ್ಲಿನ ತರಕಾರಿ ವ್ಯಾಪಾರಸ್ಥರ ಮುಂದೆ ವಾಹನ ನಿಲ್ಲಿಸಿ ಖರೀದಿ ಮಾಡುವುದರಿಂದ ಹಲವು ಸಮಯಗಳ ಕಾಲ ಹೆದ್ದಾರಿ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಇದು ಸಹಜವಾಗಿಯೇ ಇಲ್ಲಿ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುತ್ತಿದೆ.


