ಬಂಟ್ವಾಳ: ನೇತ್ರಾವತಿ ನದಿ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರು ಹರಿಯ ಬಿಡುವುದು ಹಾಗೂ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ. ಇದೇ ಕೊಳಕು ನೀರನ್ನು ಮಂಗಳೂರು ಮಹಾ ನಗರ ಪಾಲಿಕೆ, ಬಂಟ್ವಾಳ ಪುರವಾಸಿಗಳು ಕುಡಿಯಬೇಕಾಗಿದೆ. ಪರಿಣಾಮ ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಎದುರಾಗಿದೆ ಎಂದು ಬಿಜೆಪಿ ಸದಸ್ಯರು ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷರ ಅನುಮತಿಯ ಮೇರಗಿನ ಚರ್ಚೆಯ ವೇಳೆ ಸದಸ್ಯ ದೇವದಾಸ ಶೆಟ್ಟಿ ಅವರು ವಿಷಯ ಪ್ರಸ್ತಾವಿಸಿ, ಕುಡಿಯುವ ಉದ್ದೇಶದಿಂದ ನೇತ್ರಾವತಿ ನದಿಯಲ್ಲಿ ಸಂಗ್ರಹವಾಗುವ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರನ್ನು ಬಿಡಲಾಗುತ್ತಿದೆ. ನೇತ್ರಾವತಿ ನದಿಗೆ ಸಂಪರ್ಕ ಹೊಂದಿರುವ ತೋಡಿನ ಮೂಲಕ ಕೆಲ ಮನೆಯ, ವಸತಿ ಸಂಕೀರ್ಣಗಳ ಕೊಳಚೆ ನೀರನ್ನು ಹರಿಯ ಬಿಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ತೆರೆದ ಚರಂಡಿಯಿಂದಾಗಿ ಸೊಳ್ಳೆ ಉತ್ಪಾದನಾ ಕೇಂದ್ರವಾಗುತ್ತಿದೆ. ಇದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುವ ಭೀತಿ ಇದೆ ಎಂದು ಸಭೆಯ ಗಮನ ಸೆಳೆದರು.

purasabhe
ಇದಕ್ಕೆ ಧ್ವನಿ ಗೂಡಿಸಿದ ಸದಸ್ಯ ಗೋವಿಂದ ಪ್ರಭು, ಬಂಟ್ವಾಳದ ಬಡ್ಡಕಟ್ಟೆ, ಪಾಣೆಮಂಗಳೂರು ಸೇತುವೆಯಡಿ, ತಲಪಾಡಿ ಬಳಿ ನೇತ್ರಾವತಿ ನದಿಗೆ ಕೋಳಿ, ಮಾಂಸ, ಇನ್ನಿತರ ತ್ಯಾಜ್ಯ ವಸ್ತುವನ್ನು ಎಸೆಯಲಾಗುತ್ತಿದೆ. ಇನ್ನೂ ವಿಶೇಷವೆಂದರೆ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನೂ ಕೂಡಾ ನದಿಗೆ ಎಸೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವಸತಿ ಸಮುಚ್ಚಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.
ಹಾಗೆಯೇ ಸಮಗ್ರ ಒಳ ಚರಂಡಿ ಯೋಜನೆ ಕೂಡಾ ಕಳಪೆ ಕಾಮಗಾರಿಯಿಂದ ನೆನೆಗುದಿಗೆ ಬಿದ್ದಿದ್ದು ಪರಿಣಾಮವಾಗಿ ಕೊಳಚೆ ನೀರು ಚರಂಡಿಯಲ್ಲಿ ಹರಿಯುವಂತಾಗಿದೆ ಎಂದು ಅಸಮಧಾನ ತೋಡಿಕೊಂಡಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು, ಈ ಬಗ್ಗೆ ಸಚಿವ ರಮಾನಾಥ ರೈ ಅವರಲ್ಲಿ ಚರ್ಚಿಸಲಾಗಿದೆ ಎಂದರು. ವಸತಿ ಸಮುಚ್ಚಯ ಹಾಗೂ ಹೊಟೇಲ್‍ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ಅವರು ಉತ್ತರಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.
ಪುರವಾಸಿಗಳು ಕುಡಿಯುವ ನೀರಿಗೆ ಪರದಾಡುವ ಈ ಸಂದರ್ಭದಲ್ಲಿ ಜಕ್ರಿಬೆಟ್ಟಿನಲ್ಲಿರುವ ಸಮಗ್ರ ಕುಡಿಯುವ ನೀರಿನ ಸ್ಥಾವರದಲ್ಲಿ ಎರಡು ತಿಂಗಳಿನಿಂದ ಶುದ್ಧ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಗೇಟ್‍ವಾಲ್ ಅಳವಡಿಸುವ ಕನಿಷ್ಟ ಕಾರ್ಯವನ್ನು ಮಾಡದ ಬಗ್ಗೆ ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಅದನ್ನು ದುರಸ್ಥಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ತಿಳಿಸಿದರು. ಮೆಲ್ಕಾರ್ ವೃತ್ತಕ್ಕೆ ಬಾಳಪ್ಪ ಹೆಸರು: ಪುರಸಭಾ ವ್ಯಾಪ್ತಿಯನ್ನೊಳಗೊಂಡ ಮೆಲ್ಕಾರ್‍ನ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ದಿ. ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಬಂಟ್ವಾಳ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಸಲ್ಲಿಸಿರುವ ಮನವಿಯನ್ನು ಸಭೆ ಪರಿಗಣಿಸಿ ಸರ್ವಾನು ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಲಾಯಿತು.
ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ಸರಕಾರಿ ಸ್ಥಳದಲ್ಲಿ ವಾಸ್ತವ್ಯವಿರುವ 14 ಖಾತೆದಾರರ ಕದ ನಂಬ್ರವನ್ನು ರದ್ದುಗೊಳಿಸುವ ನಿರ್ಣಯಕ್ಕೆ ಸಭೆ ಅಂಗೀಕರಿಸಿದೆ. ಮುಂದಿನ ದಿನಗಳಲ್ಲಿ ಈ ಮನೆಗಳನ್ನು ಅಲ್ಲಿಂದ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯೆ ಚಂಚಲಾಕ್ಷಿ ಅವರ ಪ್ರಶ್ನೆಗೆ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಉತ್ತರಿಸಿದರು.
ವಾರ್ಡ್ ಒಂದರಿಂದ 7ರ ವರೆಗೆ ಚರಂಡಿ ದುರಸ್ಥಿ ಮತ್ತು ಹೂಳೆತ್ತುವ ಕಾಮಗಾರಿಗೆ 2014-15ನೆ ಸಾಲಿನ ಗುತ್ತಿಗೆ ದಾರನಿಗೆ ಪಾವತಿಗೆ ಬಾಕಿ ಇರುವ 5 ಲಕ್ಷ ರೂ.ವನ್ನು ನೀಡಲು ಸಭೆ ನಿರ್ಧರಿಸಿತು. ಈ ವಿಚಾರದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಟೆಂಡರ್ ಆಗಿ ನಡೆದ ಕಾಮಗಾರಿಯ ಬಿಲ್ ಪಾವತಿಸಲು ಕಾರ್ಯಸೂಚಿಯಲ್ಲಿ ಉಲ್ಲೇಖಿಸಿರುವುದನ್ನು ಸದಸ್ಯರಾದ ಪ್ರವೀಣ್ ಬಿ., ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮುನೀಶ್ ಅಲಿ, ಗಂಗಾಧರ್ ಆಕ್ಷೇ, ಪ ವ್ಯಕ್ತಪಡಿಸಿದರು.
4, 6, 7ನೆ ವಾರ್ಡ್‍ನಲ್ಲಿ ಆ ಸಂದರ್ಭದಲ್ಲಿ ಹೂಳೆತ್ತುವ ಕಾಮಗಾರಿ ನಡೆದಿಲ್ಲ ಎಂದು ಈ ಭಾಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *