ಬಂಟ್ವಾಳ: ವೇಗವಾಗಿ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮೆಲ್ಕಾರ್ ಸದ್ಯದ ಪರಿಸಿತಿಯಲ್ಲಿ ಸುಂದರ ನಗರವಾಗಿ ಕಂಗೊಳಿಸುತ್ತಿದೆ. ಒಂದೊಮ್ಮೆ ಟ್ರಾಫಿಕ್ ಕಿರಿಕಿರಿಯಿಂದ ಬೇಸೆತ್ತು ಹೋಗಿದ್ದ ಮೆಲ್ಕಾರ್ ಪೇಟೆ ಈಗ ಟ್ರಾಫಿಕ್ ಮುಕ್ತವಾಗಿ ವ್ಯವಹಾರಿಕವಾಗಿ ಬಲವಾಗಿ ಗೊಚರಿಸುತ್ತಿದೆ.

ಬಿಸಿರೋಡ್ ಬಿಟ್ಟರೆ ಪ್ರಮುಖನಗರವಾಗಿ ಸಾಕಷ್ಟು ಜನಸಂಖ್ಯೆಯಿಂದ ಕೂಡಿದ್ದ ಮೆಲ್ಕಾರ್ ಪರಿಸರ ವ್ಯವಹಾರದಲ್ಲೂ ಮುಂದಿತ್ತು . ಆದರೆ ರಸ್ತೆ ಬದಿಯಲ್ಲಿ ಆಕ್ರಮ ಅಂಗಡಿಗಳು ಮತ್ತು ವಾಹನಗಳ ಕಿರಿಕಿರಿಯಿಂದ ದಿನನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಕೂಡಿತ್ತು. ಇದನ್ನು ಮನಗಂಡ ಬಿಸಿರೋಡ್ ಟ್ರಾಫಿಕ್ ಮುಕ್ತಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದ ಇಲ್ಲಿನ ಟ್ರಾಫಿಕ್ ಎಸ್.ಐ.ಚಂದ್ರಶೇಖರಯ್ಯ ಮೆಲ್ಕಾರ್ ಪೇಟೆಯನ್ನು ಅಗಲೀಕರಣಗೊಳಿಸಿ ನಗರಕ್ಕೆ ಅಂದ ಕೊಡುವ ಕೆಲಸಕ್ಕೆ ಕೈ ಹಾಕಿದರು, ಯಶಸ್ವಿ ಕೂಡಾ ಆದರು. ಮೆಲ್ಕಾರ್ ಅಗಲೀಕರಣದಿಂದ ಇಲ್ಲಿನ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಾದರೂ ಸಾರ್ವಜನಿಕರಿಗೆ ಮಾತ್ರ ಇನ್ನಷ್ಟು ಸಂಕಷ್ಟವನ್ನು ಮಾಡಿದೆ ಎನ್ನುವುದು ಅಷ್ಟೇ ಬೇಸರದ ವಿಷಯ. ಅದರಲ್ಲೂ ಪಾದಾಚಾರಿಗಳಿಗೆ ಇದು ಮೃತ್ಯೂ ನಗರವಾಗಿ ಕೈ ಬೀಸುತ್ತಿದೆ ಎಂದರೆ ತಪ್ಪಾಗಲಾರದು. ಇದಕ್ಕ ಕಾರಣವೂ ಇದೆ.


ಇತ್ತೀಚಿನ ದಿಗಳಲ್ಲಿ ಸುಮಾರು ಜೀವಗಳನ್ನು ಮೆಲ್ಕಾರ್ ಬಲಿ ತೆಗೆದುಕೊಂಡರೆ, ಹತ್ತಾರು ವಾಹನಗಳನ್ನು ಅಪಘಾತಗೊಂಡು ಸಾಕಷ್ಟು ನೋವು ಇಲ್ಲಿನ ಜನರು ಅನುಭವಿಸಿದ್ದಾರೆ. ಅಗಲೀಕರಣ ಗೊಂಡ ಮೆಲ್ಕಾರ್‍ನಲ್ಲಿ ಟ್ರಾಫಿಕ್ ಪೋಲೀಸರು ಪಾದಾಚಾರಿಗಳಿಗೆ ಮತ್ತು ರಸ್ತೆ ದಾಟುವವರಿಗೆ ಸಹಾಯ ಮಾಡದೇ ಇರುವುದು ಪ್ರಮುಖ ವಿಷಯ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಸಾಕಷ್ಟು ವಾಹನ ದಟ್ಟನೆಯಿಂದ ಇರುವ ಇಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ವ್ಯಕ್ತಗಳಿಗೆ ರಸ್ತೆ ದಾಟುವುದು ಸಾಹಸದ ಕೆಲಸವೇ ಸರಿ. ಮೆಲ್ಕಾರ್‍ನಿಂದ ಕೋಣಾಜೆ ರಸ್ತೆಗೆ ಅಡ್ಡ ದಾಟುವ ವಾಹನಗಳಿಗೆ ಕೂಡಾ ಇಲ್ಲಿ ಸಮಸ್ಯೆಯುಂಟಾಗುತ್ತಿದೆ. ಹಾಗಾಗಿ ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಟ್ರಾಫಿಕ್ ಪೋಲಿಸರನ್ನು ನೇಮಿಸಬೇಕು ಮತ್ತು ಅವರು ಸರಿಯಾಗಿ ಕೆಲಸ ನಿರ್ವಹಿಸಬೇಕು ಎನ್ನುವುದು ಮೆಲ್ಕಾರ್ ಜನತೆಯ ಆಶಯ.


