ಕೈಕಂಬ: ರಾಜ್ಯ ಬಿಜೆಪಿ ನಾಯಕರ ನಡುವಿನ ವೈಮನಸ್ಸು ಶಮನವಾಗಿದ್ದು ಇನ್ನೇನಿದ್ದರೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರ ಅಪೇಕ್ಷೆಯತೆ 150 ಸ್ಥಾನಗಳ ಗುರಿಯತ್ತ ಸಾಗಲಿದ್ದು ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದಲೇ ಈ ಸಂದೇಶ ಮೊಳಗಲಿ ಎಂದು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ, ದ.ಕ. ಜಿಲ್ಲಾ ಪ್ರಭಾರಿ ಉದಯಕುಮಾರ್ ಶೆಟ್ಟಿ ಹೇಳಿದರು.

ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರ ಗಂಜಿಮಠದ ಒಡ್ಡೂರು ಫಾಮ್ರ್ಸ್ ನಲ್ಲಿ ಶನಿವಾರ ನಡೆದ ಒಂದು ದಿನದ ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಢ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. . ರಾಜ್ಯ ಬಿಜೆಪಿಯಲ್ಲಿ ಉಂಟಾಗಿದ್ದ ಗೊಂದಲಗಳೆಲ್ಲಾ ಶುಕ್ರವಾರ ರಾತ್ರಿ ಪಕ್ಷದ ಹಿರಿಯ ನಾಯಕರ ಮಧ್ಯಪ್ರವೇಶದಿದ ತಿಳಿಯಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಈ ವಿಚಾರದಲ್ಲಿ ಗೊಂದಲಕ್ಕೊಳಗಾಗಬೇಕಾಗಿಲ್ಲ. ಇನ್ನೇನಿದ್ದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರವು ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು. ಸಂಘಟನಾತ್ಮಕವಾದ ಜಿಲ್ಲೆಯೆಂದೇ ಪರಿಗಣಿಸಲ್ಪಟ್ಟ ಕರಾವಳಿಯಲ್ಲೂ ಬಿಜೆಪಿ 6 ರಿಂದ 7 ಸ್ಥಾನಗಳ್ನು ಗೆಲ್ಲಲಿದೆ ಎಂದರು. ಭ್ರಷ್ಟಾಚಾರ ಮುಕ್ತ ಭಾರತವಾಗಬೇಕೆಂದಿದ್ದರೆ, ಕಾಂಗ್ರೇಸ್ ಮುಕ್ತ ಭಾರತದ ಅನಿವಾರ್ಯತೆ ಇದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಕಾಂಗ್ರೇಸ್ ಆಡಳಿತದ ಎಲ್ಲಾ ಕಡೆಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಾಚಾರ ಮುಕ್ತ ದಏಶವನ್ನಾಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿ. ಇದು ಈಡೇರಾಬೇಕಾದರೆ ಕಾಂಗ್ರೇಸ್ ಮುಕ್ತ ಭಾರತವಾದಾಗ ಮಾತ್ರ ಸಾಧ್ಯ ಎಂದರು. ನೋಟ್ ಅಮಾನ್ಯದಿಂದಾಗಿ ನಕ್ಸಲ್, ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಯಾವುದೇ ಭ್ರಷ್ಠಾಚಾರದ ಆರೋಪವು ಬಂದಿಲ್ಲ ಎಂದ ಅವರು ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ ಎಂದು ಬಣ್ಣಿಸಿದರು.
ವಿಧಾನ ಪರಿಷತ್ನ ವಿಪಕ್ಷ ಮುಖ್ಯಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಜನತೆ ಮೋಸಹೋಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರದಿಂದ ಯಾವುದೇ ಸ್ಪಂದನವಿಲ್ಲದೆ ಬಡವರ, ರೈತರ ವಿರೋಧಿಯಾಗಿ ಮೆರೆಯುತ್ತಿದೆ ಇದೊಂದು ಭಂಡ ಸರಕಾರ ಎಂದು ಆರೋಪಿಸಿದರು.
ತನ್ನ ವಿಫಲತೆಯನ್ನು ಮುಚ್ಚಿಹಾಕಲು ಕೇಂದ್ರದತ್ತ ಬೆರಳು ತೋರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಕೇಂದ್ರ ನೀಡಿರುವ ಬರಪರಿಹಾರದ ಅನುದಾನವನ್ನೂ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ , ಪಠ್ಯಪುಸ್ತಕ ರಚನಾ ಸಮಿತಿ, ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಪಡೆಯದೇ ಏಕಾಏಕಿ ಪಠ್ಯಕ್ರಮ ಬದಲಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಅಪಾಯಕಾರಿ ಎಂದು ವಿವರಿಸಿದ ಅವರು, ಇಂತಹಾ ಸರ್ಕಾರವನ್ನು ಕಿತ್ತೆಸೆಯಲು ಕಾರ್ಯಕಾರಿಣಿ ಸಭೆ ದಿಟ್ಟ ಯೋಜನೆ ರೂಪಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಘಟನಾ ಕಾರ್ಯದರ್ಶಿ ಪ್ರಸಾದ್, ಜಿಲ್ಲಾ ಬಿಜೆಪಿಯ ಪ್ರಧಾನಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಕಿಶೋರ್ ಶೆಟ್ಟಿ, ಸುದರ್ಶನ್ ಮೂಡಬಿದ್ರೆ, ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಹಾಸ ಉಲ್ಲಾಳ್ ಸ್ವಾಗತಿಸಿದರು, ಮಹಿಳಾ ಮೋರ್ಚಾದ ಪ್ರಭಾ ಮಾಲಿನಿ ವಂದಿಸಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.

ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರಾ, ಎನ್. ಯೋಗೀಶ್ ಭಟ್, ಮಲ್ಲಿಕಾ ಭಂಡಾರಿ, ಕೃಷ್ಣ ಜೆ. ಪಾಲೇಮಾರ್, ಮೋನಪ್ಪ ಭಂಡಾರಿ, ಪಕ್ಷ ಪ್ರಮುಖರಾದ ರಾಜೇಶ್ ನಾೈಕ್ ಉಳಿಪಾಡಿಗುತ್ತು, ವಕ್ತಾರ ಜಿತೇಂದ್ರ ಕೊಟ್ಟಾರಿ, ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಎಸ್. ಸಿ. ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಹಾಗೂ ಅಪೇಕ್ಷಿತರು ಹಾಜರಿದ್ದರು. ಬಳಿಕ ಪಕ್ಷಚ ಸಂಘಟನೆ ಹಾಗೂ ಮುಂದಿನ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ದೆಸೆಯಲ್ಲಿ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಿತು.











