ಮೂಡುಬಿದಿರೆ: ತುಳುನಾಡಿನ ವೀರ ಕ್ರೀಡೆ ಕಂಬಳ ನಡೆಯುವ ಬಗ್ಗೆ ಹೈಕೋರ್ಟ್ ತೀರ್ಪಿಗೆ ಕಾಯುತ್ತಿರುವ ನಡುವೆಯೇ ಜ.28ರಂದು ತೀರ್ಪು ಪರವಾಗಿ ಬಂದರೆ ವಿಜಯೋತ್ಸವ ಇಲ್ಲವಾದರೆ ಕಂಬಳ ನಡೆಸುವ ಮೂಲಕವೇ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಕಾಸರಗೋಡು ಸೇರಿದಂತೆ ಅವಿಭಜಿತ ದ,ಕ ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಕಂಬಳದ ಕೋಣಗಳ ಮಾಲಕರು, ಓಟಗಾರರು, ಹಿತೈಷಿಗಳ ಸಮಾಲೋಚನಾ ತುರ್ತು ಸಭೆ ಎಂ.ಸಿ.ಎಸ್.ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದಿದ್ದು ಈ ನಿರ್ಧಾರ ಕೈಗೊಳ್ಳಲಾಗಿದೆ.

jain

ಹೈಕೋರ್ಟ್ ತೀರ್ಪು ಕಂಬಳದ ಪರವಾಗಿ ಬರಬಹುದು ಎಂಬ ವಿಶ್ವಾಸವಿದೆ. ಜ28ರಂದು ಬೆಳಿಗ್ಗೆ 9ಕ್ಕೆ ಕರಾವಳಿಯ ಎಲ್ಲ ಕಂಬಳದವರು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕೋಣಗಳೊಂದಿಗೆ ಸೇರಲಿದ್ದಾರೆ. ಅಲ್ಲಿಂದ ಮೆರವಣಿಗೆಯಲ್ಲಿ ಕಡಲಕೆರೆ ನಿಸರ್ಗಧಾಮದ ಕಂಬಳದ ಕರೆಗೆ ತೆರಳಿ ಅಲ್ಲಿ ಪ್ರತಿಭಟನೆ ಇಲ್ಲವೇ ವಿಜಯೋತ್ಸವ ಆಚರಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಈ ನಡುವೆ ಬಗ್ಗೆ ಜಾನಪದ ಕ್ರೀಡೆ ಕಂಬಳದ ಉಳಿವಿಗಾಗಿ ಜನರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಡಲಾಯಿತು.

ರಾಜಕೀಯರಹಿತ ಒತ್ತಡಕ್ಕೆ ತಮಿಳು ನಾಡಿನಲ್ಲಿ ಜಲ್ಲಿಕಟ್ಟಿನ ಕ್ರೀಡೆಗೆ ಕೇಂದ್ರ ಸರ್ಕಾರವೂ ಮಣಿದಿದೆ. ನಮ್ಮಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿದೆ. ಒಗ್ಗಟ್ಟಿನ ಜನಶಕ್ತಿಯ ಪ್ರದರ್ಶನ ಕಂಬಳದ ವಿಚಾರದಲ್ಲಿ ಅಗತ್ಯವಿದೆ ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.

kambala 1..

ಕಂಬಳ ಉಳಿಯಬೇಕು ಎನ್ನುವುದು ಜನತೆಯ ಆಶಯ. ಇದನ್ನು ಸರಕಾರಕ್ಕೆ ಕೋರ್ಟಿಗೆ ಮನವರಿಕೆ ಮಾಡುವ ಅಗತ್ಯವಿದೆ. ಅಗತ್ಯವಿರುವ ಹೋರಾಟಕ್ಕೆ ತಾವು ಜನತೆಯ ಪರವಾಗಿದ್ದು ಜೈಲಿಗೆ ಹೋಗಲೂ ಸಿದ್ಧ ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಪ್ರಕಟಿಸಿದರು.ಕಂಬಳದ ಉಳಿವಿಗಾಗಿ ಸೂಕ್ತ ರೀತಿಯ ದಾಖಲೆಗಳ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಅಗತ್ಯವಿದೆ. ಪೇಜಾವರ ಶ್ರೀಗಳವರು, ಚಿತ್ರರಂಗದ ಪ್ರಮುಖರು ಕಂಬಳವನ್ನು ಬೆಂಬಲಿಸುತ್ತಿದ್ದಾರೆ ಎಂದು ಮೂಡುಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು.

ಜೆಡಿಎಸ್ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಅಶ್ವಿನ್ ಪಿರೇರಾ ಮಾತನಾಡಿ ಕಂಬಳ ಎಲ್ಲರದ್ದು ಎಂಬ ಭಾವನೆ ಮೂಡಬೇಕು. ಶಾಲಾ ಕಾಲೇಜು ಮಕ್ಕಳು, ಚಿತ್ರರಂಗ ಸಂಘ ಸಂಸ್ಥೆಗಳು ಎಲ್ಲರೂ ಹೋರಾಟದಲ್ಲಿ ಜತೆಗೂಡಬೇಕು ಎಂದರು. ಗೋಪಾಲಕೃಷ್ಣ ಭಟ್, ನವೀನ್‍ಚಂದ್ರ ಆಳ್ವ, ಜೀವನ್‍ದಾಸ್ ಅಡ್ಯಂತಾಯ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಜೈನ್, ಕೋಶಾಧಿಕಾರಿ ಕೆ.ಪಿ.ಆರ್. ರಘುರಾಮ ಹೆಗ್ಡೆ, ಅಂತಾರಾಷ್ಟ್ರೀಯ ಕಬಡ್ಡಿ ಪಟು ಸುಕೇಶ್ ಶೆಟ್ಟಿ, ಅಶೋಕ್ ರೈ ಉಪ್ಪಿನಂಗಡಿ, ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಹೆರಂಜೆ ಸುಧಾಕರ ಹೆಗ್ಡೆ, ಕಟಪಾಡಿ ಎರ್ಮಾಳು ರೋಹಿತ್ ಹೆಗ್ಡೆ, ಸಂಚಾಲಕ ಸೀತಾರಾಮ ಶೆಟ್ಟಿ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *