ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಡಿ.31ರಂದು ವಾರ್ಷಿಕ ಗುತ್ತಿಗೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ನಡೆಯುವ ತನಕ ಮತ್ತೆ ಈ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸಲು ಪುರಸಭೆ ತೀರ್ಮಾನಿಸಿದೆ.
ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯಸಭೆಯಲ್ಲಿ ವಿರೋಧ ಪಕ್ಷ (ಬಿಜೆಪಿ) ಸದಸ್ಯ ಬಿ.ದೇವದಾಸ ಶೆಟ್ಟಿ ವಿಷಯ ಪ್ರಸ್ತಾಪಿಸಿದರು. ಇಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ರೂ 3.40ಲಕ್ಷ ಮೊತ್ತ ಪಾವತಿಸಲಾಗುತ್ತಿದೆ. ಈಗಾಗಲೇ ಅಸಮರ್ಪಕ ತ್ಯಾಜ್ಯ ವಿಲೇವಾರಿ ಆರೋಪ ಹೊತ್ತಿರುವ ಗುತ್ತಿಗೆದಾರ ಅಬ್ದುಲ್ ಸಲಾಂ ಅವರನ್ನು ಬದಲಾಯಿಸುವಂತೆ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಮತ್ತೆ ಅವರನ್ನೇ ಏಕೆ ಮುಂದುವರಿಸುತ್ತಿದ್ದೀರಿ…? ಎಂದು ಪ್ರಶ್ನಿಸಿದರು. ಇದಕ್ಕೆ ವಿರೋಧ ಪಕ್ಷ ನಾಯಕ ಎ.ಗೋವಿಂದ ಪ್ರಭು ಧ್ವನಿಗೂಡಿಸಿದಾಗ ಸಭೆಯಲ್ಲಿ ಕೆಲಹೊತ್ತು ಗದ್ದಲ ಉಂಟಾಯಿತು. ಇದೀಗ ಮುಂದಿನ ಟೆಂಡರ್ ಪ್ರಕ್ರಿಯೆ ನಡೆಯುವ ತನಕ ಅವರನ್ನು ಮುಂದುವರಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸ್ಪಷ್ಟಪಡಿಸಿದರು.
ಇನ್ನೊಂದೆಡೆ ಬಿ.ಸಿ.ರೋಡ್ ಮುಖ್ಯವೃತ್ತ ಬಳಿ ರೂ 1.40ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದ್ದರೂ ಬಳಿಕ ಪ್ರವೇಶ ನಿರ್ಬಂಧಿಸಲಾಗಿದ್ದ ಟ್ರೀ ಪಾರ್ಕನ್ನು ಮಂಗಳೂರಿನ ಪ್ರಮೋದ್ ನರ್ಸರಿ ಸಂಸ್ಥೆಗೆ ಮಾಸಿಕ ರೂ 60ಸಾವಿರದಂತೆ ನಿರ್ವಹಣೆಗೆ ನೀಡಲು ಸಭೆ ನಿರ್ಣಯಿಸಿತು. ಉಳಿದಂತೆ ಈ ಹಿಂದಿನ ಸಭೆಯಲ್ಲಿ ನಿಗದಿಪಡಿಸಿದಂತೆ ಹಿರಿಯರಿಗೆ ರೂ 10 ಮತ್ತು ಮಕ್ಕಳಿಗೆ ರೂ 5ರಂತೆ ಪ್ರವೇಶ ದರ ವಸೂಲಿಗೆ ಪುರಸಭೆ ವತಿಯಿಂದಲೇ ನಿರ್ವಹಿಸಲು ನಿರ್ಣಯಿಸಲಾಯಿತು.
ಪುನರಾರಂಭ:
ಜ.1ರಿಂದ ಅಥವಾ 7ರಿಂದ ಟ್ರೀ ಪಾರ್ಕ್ಗೆ ಮತ್ತೆ ಪ್ರವೇಶ ಮುಕ್ತಗೊಳಿಸುವುದಾಗಿ ಮುಖ್ಯಾಧಿಕಾರಿ ಪ್ರಕಟಿಸಿದರು.
ಸದಸ್ಯರಾದ ಸದಾಶಿವ ಬಂಗೇರ, ಜಗದೀಶ ಕುಂದರ್, ಪ್ರವೀಣ ಬಿ., ಗಂಗಾಧರ ಪೂಜಾರಿ, ವಾಸು ಪೂಜಾರಿ, ಮಹಮ್ಮದ್ ಶರೀಫ್, ವಸಂತಿ ಚಂದಪ್ಪ, ಸುಗುಣ ಕಿಣಿ, ಜೆಸಿಂತಾ, ಚಂಚಲಾಕ್ಷಿ ಮತ್ತಿತರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಅಧಿಕಾರಿಗಳಾದ ಲೀಲಾವತಿ, ಅಬ್ದುಲ್ ರಝಾಕ್, ರತ್ನಪ್ರಸಾದ್ ಹೆಗ್ಡೆ, ಮತ್ತಡಿ, ಉಮಾವತಿ, ಮೀನಾಕ್ಷಿ ಮತ್ತಿತರರು ಇದ್ದರು.

