ಬಂಟ್ವಾಳ:ಬ್ರಹ್ಮರಕೊಟ್ಲುವಿನ ಟೋಲ್ ಬೂತ್ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿರುವ ಪುರಸಭಾ ಸದಸ್ಯ ಶರೀಫ್ ಕಳೆದ ತಿಂಗಳ ಸಾಮಾನ್ಯ ಸಭೆಗೆ ಚಕ್ಕರ್ ಆಗಿದ್ದರೂ ಬಳಿಕ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರುವ ಪ್ರಕರಣ ಜೀವಂತ ಇರುವಾಗಲೇ ಅದೇ ಸಭೆಯಲ್ಲಿ ಕೋಟ್ಯಾಂತರ ರೂಪಾಯಿಗೆ ಕ್ರಿಯಾ ಯೋಜನೆ ತಯಾರಿಸಿ ಅಕ್ರಮ ನಿರ್ಣಯ ದಾಖಲಿಸಿರುವ ಪ್ರಕರಣವೊಂದು ಬಯಲಿಗೆ ಬಂದಿದೆ.
ಜೂನ್ 16ರಂದು ನಡದ ಸಾಮಾನ್ಯ ಸಭೆಯಲ್ಲಿ ಸುಮಾರು 3.33ಕೋಟಿಗೂ ಅಧಿಕ ರೂ.ಗೆ (3,33,14,000.00) ಕ್ರಿಯಾ ಯೋಜನೆ ತಯಾರಿಸಿ ಅಕ್ರಮವಾಗಿ ನಿರ್ಣಯ ಕೈಗೊಂಡ ಅಂಶ ಬುಧವಾರ ಪುರಸಭೆಯಲ್ಲಿ ಬಿಜೆಪಿ ಸದಸ್ಯರು ನಿರ್ಣಯದ ಪ್ರತಿಗಾಗಿ ಧರಣಿ ನಡೆಸಿದ ಸಂದರ್ಭದಲ್ಲಿ ಅವರಿಗೆ ನೀಡಲಾದ ಕಂಪ್ಯೂಟರೀಕೃತ ನಿರ್ಣಯದ ಪ್ರತಿಯಲ್ಲಿ ದಾಖಲಾಗಿರುವುದು ಕಂಡು ಬಂದಿದ್ದು ಇದು ಈಗ ಪುರಸಭಾ ಆಡಳಿತ ಮತ್ತೊಂದು ವಿವಾದದ ಅಡಕತ್ತರಿಗೆ ಸಿಲುಕಿದಂತಾಗಿದೆ.
ಈ ಹೊಸ ವಿವಾದದಿಂದ ವಿಪಕ್ಷ ಬಿಜೆಪಿ ಸದಸ್ಯರು ಮಾತ್ರವಲ್ಲ ಆಡಳಿತ ಪಕ್ಷದ ಕೆಲ ಸದಸ್ಯರು ಕೂಡಾ ಗರಂ ಆಗಿದ್ದಾರೆಂದು ತಿಳಿದು ಬಂದಿದ್ದು ಈ ಕುರಿತು ಬಂಟ್ವಾಳ ಕಾಂಗ್ರೇಸಿಗೆ ಹೈಕಮಾಂಡ್ ಆಗಿರುವ ಸಚಿವ ರಮಾನಾಥ ರೈಯವರ ಬಳಿ ದೂರು ಒಯ್ಯಲು ಸಜ್ಜಾಗಿದ್ದಾರೆಂದು ಗೊತ್ತಾಗಿದೆ.
ಹೇಗೆ ಅಕ್ರಮ ?
ಜೂನ್ 16ರಂದಿನ ಸಾಮಾನ್ಯ ಸಭೆಯ ಕುರಿತಂತೆ ಸದಸ್ಯರಿಗೆ ನೀಡಲಾದ ಅಜೆಂಡಾ ಪ್ರತಿಯಲ್ಲಿ ಕ್ರಮ ಸಂಖ್ಯೆ 4 ರಲ್ಲಿ 2014-15 ರ ಸಾಲಿನ ಎಸ್.ಎಫ್.ಸಿ ಯೋಜನೆಯಲ್ಲಿ 9.60 ಲಕ್ಷ ರೂಪಾಯಿಗೆ ಕ್ರಿಯಾಯೋಜನೆ ತಯಾರಿಸುವುದೆಂದು ಉಲ್ಲೇಖಿಸಲಾಗಿತ್ತು.
ಆದರೆ ಈ ಅನುದಾನ ಸಹಿತ ಹೆಚ್ಚುವರಿಯಾಗಿ 151.86ಲಕ್ಷ ರೂಪಾಯಿಗೆ ಕ್ರಿಯಾ ಯೋಜನೆ ತಯಾರಿಸಿರುವುದು ಹಾಗೂ ಸೂಚನಾ ಪತ್ರ 9ರಂತೆ 13ನೇ ಹಣಕಾಸು ಯೋಜನೆಯಡಿ 2.16 ಲಕ್ಷ ರೂ.ವಿನ ಜತೆಗೆ ಹೆಚ್ಚುವರಿಯಾಗಿ 181.28ಲಕ್ಷ ಸೇರಿ ಒಟ್ಟು ಈ ಎರಡೂ ಯೋಜನೆಯಡಿ 3.33 ಕೋಟಿ ರೂಪಾಯಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿರುವ ಸಂಗತಿ ಬಿಜೆಪಿ ಸದಸ್ಯರಿಗೆ ಲಭ್ಯವಾಗಿರುವ ನಿರ್ಣಯದ ಪ್ರತಿಯಲ್ಲಿ ಬೆಳಕಿಗೆ ಬಂದಿದ್ದು ಅಚ್ಚರಿಯನ್ನು ಮೂಡಿಸಿದೆ.
ಇಷ್ಟೊಂದು ಮೊತ್ತದ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅದನ್ನು ಸಾಮಾನ್ಯ ಸಭೆಯಲ್ಲಿಟ್ಟು ಚಚರ್ಿಸಿ ಸದಸ್ಯರು ನೀಡುವ ಕಾಮಗಾರಿಯ ಪಟ್ಟಿಗೆ ಅನುದಾನ ಹಂಚಿಕೆ ಮಾಡಿ ಮಂಜೂರಾತಿ ಪಡೆಯುವುದು ನಿಯಮ.
ಆದರೆ ಎಸ್.ಎಫ್.ಸಿ ಮತ್ತು 13ನೇ ಹಣಕಾಸು ಯೋಜನೆಯಡಿ 2014-15ನೇ ಸಾಲಿಗೆ ಮಂಜೂರಾದ ಅನುದಾನದ ಬಗ್ಗೆ ಕೌನ್ಸಿಲ್ ಸಭೆಗೆ ತಾರದೆ ಜೂನ್ 16ರಂದಿನ ಸಾಮಾನ್ಯ ಸಭೆಯ ಅಜೆಂಡಾ ಪ್ರತಿ ಕ್ರಮ ಸಂಖ್ಯೆ 4 ಮತ್ತು 9ರಲ್ಲಿ ಹೆಚ್ಚುವರಿಯಾಗಿ 3.33 ಕೋಟಿ ರೂಪಾಯಿಯ ಕ್ರಿಯಾ ಯೋಜನೆಯನ್ನು ತಯಾರಿಸಿರುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿದೆ.
ವಿಶೇಷವೆಂದರೆ ಆಡಳಿತ ಪಕ್ಷದ ಕೆಲ ಸದಸ್ಯರು ನೀಡಿರುವ ಕಾಮಗಾರಿಯ ಪಟ್ಟಿಯು ಅದಲು,ಬದಲು ಹಾಗೂ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ಬಗ್ಗೆ ಅತೃಪ್ತರಾಗಿದ್ದು ಈಗಾಗಿ ಈ ಒಟ್ಟು ವಿಚಾರವನ್ನು ಸಚಿವ ರಮಾನಾಥ ರೈಯವರ ಗಮನಕ್ಕೆ ತರಲು ಬಯಸಿದ್ದಾರೆಂದು ತಿಳಿದು ಬಂದಿದೆ.
ಈತನ್ಮದ್ಯೆ ಸಭೆಗೆ ಚಕ್ಕರ್ ಹಾಜರಿ ಪುಸ್ತಕದಲ್ಲಿ ಶರೀಫ್ ಸಹಿ ಹಾಗೂ ಕಾನೂನು ಬಾಹಿರವಾಗಿ 3.33 ಕೋಟಿ ರೂಪಾಯಿಗೆ ಕ್ರಿಯಾಯೋಜನೆ ತಯಾರಿಸಿರುವ ಪ್ರಕರಣಗಳೆರಡನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸದಸ್ಯರು ಪುರಸಭೆಯ ಆಡಳಿತ ದುರುಪಯೋಗವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅಲ್ಲದೆ ಲೋಕಾಯುಕ್ತ, ಜಿಲ್ಲಾಧಿಕಾರಿಗೂ ದೂರು ನೀಡಲು ಸಿದ್ದತೆ ನಡೆಸುತ್ತಿದ್ದಾರೆ.ಇದೀಗ ಈ ಎರಡೂ ಪ್ರಕರಣದಿಂದ ಬಂಟ್ವಾಳ ಪುರಸಭೆಯ ಆಡಳಿತ ಪಕ್ಷ ಇಕ್ಕಟ್ಟಿಗೆ ಸಿಲುಕಿದ್ದು ಪುರವಾಸಿಗಳಲ್ಲಿ ಕುತೂಹಲ ಮೂಡಿಸಿದೆ.
ನೆರವಿಗೆ ಬಾರದ ಸದಸ್ಯರು !
ಹದಿನೈದು ದಿನಗಳಾದರೂ ನಿರ್ಣಯದ ಪ್ರತಿ ದೊರಕದ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಹಠಾತ್ ಧರಣಿ ಕುಳಿತ ಸುದ್ದಿ ತಿಳಿದು ಅಧ್ಯಕ್ಷೆ ವಸಂತಿ ಕಚೇರಿಗಾಗಮಿಸಿದರೂ ಕಾಂಗ್ರೇಸ್ ಬೆಂಬಲಿತ ಸದಸ್ಯ ಪ್ರವೀನ್ ಹೊರತು ಉಪಾಧ್ಯಕ್ಷೆಯಾಗಲಿ ಕಾಂಗ್ರೇಸಿನ ಇತರ ಯಾವೊಬ್ಬ ಸದಸ್ಯನೂ ಅಧ್ಯಕ್ಷೆಯ ನೆರವಿಗೆ ಈ ಸಂದರ್ಭದಲ್ಲಿ ಧಾವಿಸಿ ಬಾರದಿರುವುದು ಈಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚಚರ್ೆಗೆ ಗ್ರಾಸವಾಗಿದೆ.15 ದಿನಗಳಾದರೂ ನಿರ್ಣಯ ದಾಖಲಿಸದಿರುವುದು ಅಧ್ಯಕ್ಷರ ಸ್ವಯಂಕೃತ ತಪ್ಪು, ಈ ಬಗ್ಗೆ ಮೊದಲೇ ಅವರಿಗೆ ತಿಳುವಳಿಕೆ ನೀಡಿದ್ದೇವೆ ಎಂಬುದು ಕಾಂಗ್ರೇಸ್ ಸದಸ್ಯರೊಬ್ಬರ ಅಬಿಪ್ರಾಯ. ಇನ್ನೂ ಕೂಡಾ ನಿರ್ಣಯ ದಾಖಲಿಸದಿರುವ ಬಗ್ಗೆ ಬಿಜೆಪಿ ಸದಸಯರ ಪ್ರತಿಭಟನೆಯಿಂದಷ್ಟೇ ಗೊತ್ತಾಗಿದೆಯೆಂದು ಇದೇ ಸದಸ್ಯ ತಿಳಿಸಿದ್ದಾರೆ.
