ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಎಲಿಯನಡುಗೋಡು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ರೂ 10ಸಾವಿರ ಮೊತ್ತದ ನಗದು ಸಹಿತ ರೂ 1.30ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಸೋಮವಾರ ನಡೆದಿದೆ. ಇಲ್ಲಿನ ನಿವಾಸಿ ಮಹಮ್ಮದ್ ರಫೀಕ್ ಎಂಬವರು ವಿದೇಶದಲ್ಲಿದ್ದು, ಮನೆಯಲ್ಲಿ ಇವರ ಪತ್ನಿ ಶಹನಾಝ್ ಮತ್ತು ಮಕ್ಕಳು ಮಾತ್ರ ಇದ್ದಾರೆ ಎನ್ನಲಾಗಿದೆ.
ಶಹನಾಝ್ ಅವರು ಕಾವಳಪಡೂರು ಎಂಬಲ್ಲಿರುವ ಸಹೋದರಿ ಮನೆಗೆ ತನ್ನ ಮಕ್ಕಳೊಂದಿಗೆ ಕಳೆದ ಶನಿವಾರ ತೆರಳಿದ್ದು, ಸೋಮವಾರ ಮನೆಗೆ ವಾಪಾಸು ಬಂದಾಗಲೇ ಕಳವು ನಡೆದಿರುವುದು ತಿಳಿದು ಬಂದಿದೆ. ಮನೆಯ ಹಿಂಬಾಗಿಲಿನ ಚಿಲಕ ಮುರಿದು ಕಳ್ಳರು ಒಳಪ್ರವೇಶಿಸಿದ್ದು, ಕಪಾಟು ಒಳಗಿದ್ದ ನಗದು ಮತ್ತು ಚಿನ್ನಾಭರಣ ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

