ಕೈಕಂಬ: 73-74 ನೇ ತಿದ್ದುಪಡಿಯ ಮೂಲಕ ಪಂಚಾಯತ್ ಮಸೂದೆ ಜಾರಿ ಬಂತು ಅಲ್ಲದೇ ಮುಂಚೆ ಗ್ರಾಮೀಣ ಪ್ರದೇಶಗಳು ಎಲ್ಲಾ ರಂಗದಲ್ಲೂ ಬಹಳ ಹಿನ್ನಡೆಯನ್ನು ಕಾಣುತ್ತಿತ್ತು. ಆದರೆ ಈಗ ಎಲ್ಲಾ ರಂಗದಲ್ಲೂ ಬದಲಾವಣೆಯನ್ನು ನೋಡಬಹುದು ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.


ಅವರು ಶನಿವಾರ ಗಂಜಿಮಠ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆದ ದ.ಕ.ಜಿಲ್ಲಾ ಪಂ, ತಾ.ಪಂ, ಮಂಗಳೂರು, ಗಂಜಿಮಠ ಗ್ರಾ.ಪಂ. ಇದರ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನೂತನವಾಗಿ ನಿರ್ಮಿಸಿರುವ ” ರಾಜೀವ್ ಗಾಂಧಿ ಸೇವಾ ಕೇಂದ್ರ” ದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ದೇಶದ ಅನೇಕ ಭಾಗಗಳಲ್ಲಿ ಜನರು ಊಟಕ್ಕೂ ಕಷ್ಟ ಪಡುವ ಸ್ಥಿತಿ ಇತ್ತು. ಈ ಒಂದು ದೃಷ್ಟಿಯಿಂದ ಉದ್ಯೋಗ ಖಾತರಿ ಯೋಜನೆಯನ್ನು ತರಲಾಗಿದೆ. ಈ ಬದಲಾವಣೆಗೆ ಕಾರಣರಾದಂತಹ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿ ಜನರಿಗೆ ಅನುಕೂಲವಾಗುವಂತೆ ಸರ್ವಶಿಕ್ಷಣ, ಕುಡಿಯುವ ನೀರಿನ ಸೌಲಭ್ಯ, ಕಾಮಗಾರಿಕರಣ, ಅಂಬೆಡ್ಕರ್ ಭವನ ಕೂಟ, ರಸ್ತೆ ಅಭಿವೃದ್ಧಿ, ಹೀಗೆ ವಿವಿಧ ಕಾರ್ಯವನ್ನು ಹಾಗೂ ಆಯಾ ಆಯಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಶಾಸಕರು, ಅಧಿಕಾರಿಗಳು ಮಾಡ್ತಾ ಇರೋದು ಬಹಳ ಸಂತೋಷ ಕೊಡುತ್ತದೆ. ಪಂಚಾಯತ್ ಒಂದು ಶಕ್ತಿ. ಜಿಲ್ಲೆಯ ಅನೇಕ ಭಾಗಗಳಲ್ಲಿ ಹೊಸ ಪಂಚಾಯತ್ ಸ್ಥಾಪನೆಯಾಗಿರುವುದು ಸಂತೋಷದ ವಿಷಯ ಎಂದು ಅವರು ಹೇಳಿದರು.


ದ.ಕ.ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ ಮಾತನಾಡಿ, ಸರಕಾರದಿಂದ ಅನುದಾನ ಬೇಕಾದಷ್ಟು ಬಂದರೂ ಅದನ್ನು ಕಾರ್ಯರೂಪಕ್ಕೆ ತರಲು ಯಾರೂ ಮುಂದೆ ಬರುವುದಿಲ್ಲ. ಜನರ ಪ್ರತಿನಿಧಿಗಳಿಗೆ ಸ್ಪಂದಿಸಿ ಕಟ್ಟಡ ಉದ್ಘಾಟನಾ ಸಮಾರಂಭ ಅರ್ಥಪೂರ್ಣವಾಗಿ ನೆರವೇರಿದ್ದು ಬಹಳ ಖುಷಿ ತಂದಿದೆ ಹಾಗೂ ಇನ್ನೂ ಅನೇಕ ರೀತಿಯ ಒಳ್ಳೆ ಕೆಲಸಗಳು ಮಾಡುವಂತಾಗಲಿ ಎಂದು ನುಡಿದರು.


ಸಣ್ಣನಿರಾವರಿ ವ್ಯವಸ್ಥೆ, ಕಾಂಕ್ರೀಟಿಕರಣ, ಶಿಕ್ಷಣ ವ್ಯವಸ್ಥೆ, ಪಿಂಚಾಣಿ ಅದಾಲತ್ ಮೂಲಕ ನಾಗರಿಕ ಹಕ್ಕು, ಅನ್ಯಾಯ ನಡೆದರೆ ವ್ಯವಸ್ಥಿತವಾಗಿ ಕಾರ್ಯಾಚರಣೆ, ಸಾಲ ಮನ್ನಾ ಯೋಜನೆ, ತೂಗು ಸೇತುವೆ, ಧಾರ್ಮಿಕ ಕ್ಷೇತ್ರದಲ್ಲಿ ಪ್ರಗತಿ, ಹಕ್ಕು ಪತ್ರ ವಿತರಣೆ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಂಡಿದೆ. ಇನ್ನೂ ಹೆಚ್ಚಿನ ಪ್ರಗತಿ ಕಾಣಲು ನಾವೆಲ್ಲರೂ ಒಗ್ಗೂಡಬೇಕೆಂದು ಮಂಗಳೂರು ಉತ್ತರ ಸಭಾ ಕೇತ್ರ ಶಾಸಕ ಮೊಹಿಯುದ್ಧಿನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಈ ಸಂದರ್ಭದಲ್ಲಿ ಪಂ. ಸಹಾಯಕ ಇಂಜಿನಿಯರಿಂಗ್ ಕೃಷ್ಣ ಕುಮಾರ್ ಹಾಗೂ ಕಟ್ಟಡ ಮೇಲುಸ್ತುವಾರಿ ಬೂವ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ತಾ.ಪಂ ಸದಸ್ಯರಾದ ಸಚಿನ್ ಅಡಪ, ಸುನಿಲ್ ಗಂಜಿಮಠ, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಗ್ರಾ.ಪಂ. ಉಪಾಧ್ಯಕ್ಷ ಝಾಕೀರ್ ಆರ್.ಎಸ್., ಕಂದಾವರ ಗ್ರಾ. ಪಂ ಅಧ್ಯಕ್ಷ ವಿಜಯ್ ಗೋಪಾಲ್ ಸುವರ್ಣ, ಅಬ್ದುಲ್ ಮಜೀರ್ ಸುರಲ್ಪಾಡಿ, ಮಾಜಿ ಜಿ.ಪಂ ಸದಸ್ಯ ಕೃಷ್ಣ ಅಮೀನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಜಗದೀಶ್ ಎಸ್. ಧನ್ಯವಾದ ಸಮರ್ಪಿಸಿದರು. ನಿತೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

