ಮೂಡುಬಿದಿರೆ: ಸಮೀಪದ ಸರ್ಕಾರಿ ಉನ್ನತೀಕರಿಸಿದ ಶಾಲೆ ಕಲ್ಲಬೆಟ್ಟುವಿನಲ್ಲಿ ಸೋಮವಾರದಂದು ಶಿಕ್ಷಕಿಯರು ಮಕ್ಕಳಿಗಾಗಿ ಸಮೂಹ ಗೀತೆಗಳನ್ನು ಹಾಡುವ ಮೂಲಕ ಮಕ್ಕಳ ದಿನಾಚರಣೆಯನ್ನು ಮಕ್ಕಳ ಜತೆ ಆಚರಿಸಿದರು.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಶಾಲೆಯ ಮಕ್ಕಳು ತಮ್ಮ ಶಿಕ್ಷಕರುಗಳಿಗಾಗಿ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ಶಿಕ್ಷಕರುಗಳಿಗೆ ಬಹುಮಾನಗಳನ್ನು ನೀಡಿ ಅವರ ಮನಸ್ಸುಗಳನ್ನು ಖುಷಿಗೊಳಿಸುತ್ತಾರೆ. ಅದಕ್ಕಾಗಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರುಗಳು ತಮ್ಮ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಅವರ ಜತೆ ಬೆರೆಯುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಇಂತಹ ಪರಿಪಾಠ ಬೆಳೆದು ಬಂದಿದೆ ಅದರಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆಯಂದು ಶಿಕ್ಷಕರುಗಳು ಮಕ್ಕಳಿಗಾಗಿ ಸಮೂಹಗೀತೆಗಳನ್ನು ಹಾಡಿದ್ದಾರೆ ಮತ್ತು ಡ್ಯಾನ್ಸ್‍ಗೆ ಮಕ್ಕಳ ಜತೆ ಹೆಜ್ಜೆ ಹಾಕಿದ್ದಾರೆ.
ನಂತರ ಮಕ್ಕಳ ಮಂತ್ರಿ ಮಂಡಲದ ನೇತೃತ್ವದಲ್ಲಿಯೇ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕಿ ನಿತ್ಯಾ ಕೃಷ್ಣ ಸಹಿತ ಸಂಸತ್‍ನ ಮಂತ್ರಿಗಳು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಸುಮನಾ ಪೈ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಹಶಿಕ್ಷಕಿ ಪ್ರತಿಭಾ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.

