ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಆಡಳಿತರೂಢರು ಏಕಾಏಕಿ ಅವೈಜ್ಞಾನಿಕವಾಗಿ ತೆರಿಗೆ ಏರಿಕೆಗೊಳಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ನರಿಕೊಂಬು – ಶಂಭೂರು ನಾಗರಿಕ ಜಾಗೃತ ಸಮಿತಿ ವತಿಯಿಂದ ಶನಿವಾರ ಪಂಚಾಯಿತಿ ಕಚೇರಿ ಎದುರು ಬಾರೀ ಪ್ರತಿಭಟನೆ ನಡೆಯಿತು.
ಕಳೆದ 2015ರಲ್ಲಿ ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಅಧಿಕಾರಕ್ಕೆ ಬಂದ ಆಡಳಿತಾರೂಢರು ಕಳೆದ 6 ತಿಂಗಳಿನಿಂದ ಕಟ್ಟಡ, ಮನೆ ಹಾಗೂ ಇತರ ತೆರಿಗೆಯನ್ನು ಏಕಾಯೇಕಿ ಶೇ.4ರಿಂದ 10 ಪಟ್ಟು ಅವೈಜ್ಞಾನಿಕವಾಗಿ ಏರಿಕೆಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿನ ಬೀಡಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ಹಾಗೂ ಕೃಷಿಕರು ಮತ್ತಿತರ ಬಡಜನರಿಗೆ ಭಾರೀ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಇನ್ನೊಂದೆಡೆ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಅಪಾರ ಮೊತ್ತದ ಹಣಕಾಸು ಅವ್ಯವಹಾರ, ದಾರಿದೀಪ ನಿರ್ವಹಣೆ ಮತ್ತು ಪಂಪ್ ದುರಸ್ತಿ ದರ ಏರಿಕೆ ಮೂಲಕ ಅವ್ಯವಹಾರ, ಗ್ರಾಮೀಣ ಉದ್ಯೋಗ ಖಾತರಿ ಕಾಮಗಾರಿಯಲ್ಲಿ ಲಕ್ಷಾಂತರ ಮೊತ್ತದ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪಿ. ಎಸ್. ಅಬ್ದುಲ್ ಹಮೀದ್, ಮಾಧವ ಕರ್ಬೆಟ್ಟು, ಮಂಜುನಾಥ ಭಟ್, ಜಯಂತ್ ನಾಯಕ್ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ, ಪ್ರಮುಖರಾದ ಆಲ್ಫೋನ್ಸ್ ಮಿನೇಜಸ್, ಆಲ್ಬರ್ಟ್ ಮಿನೇಜಸ್, ಸಾಯಿರಾಮ್ ನಾಯಕ್, ನಿತ್ಯಾನಂದ ಸಪಲ್ಯ, ಲಕ್ಷ್ಮಣ ಸಪಲ್ಯ, ನಾಟಿ ಕರಷ್ಣರಾಜ ಶೆಟ್ಟಿ, ಬೇಬಿ ಸಂಜೀವ, ಭರತ್ರಾಜ್, ಇಸ್ಮಾಯಿಲ್ ಉಪ್ಪುಗುಡ್ಡೆ, ಗೋಪಾಲ ಕಬರ್ೆಟ್ಟು, ಅಹಮ್ಮದ್ ಬಾವ ಉಪ್ಪುಗುಡ್ಡೆ, ಮಾಧವ ಸಪಲ್ಯ, ಸುಂದರ ಪೂಜಾರಿ ಮತ್ತಿತರರು ಇದ್ದರು.
ಭೇಟಿ:
ಇದೇ ವೇಳೆ ಅಧ್ಯಕ್ಷ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮತ್ತಿತರರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿದರು. ಈ ಹಿಂದೆ ಹೆಂಚಿನ ಮನೆಗೆ ನಿಗದಿಯಾಗಿದ್ದ ಚ.ಮೀ.ಗೆ ರೂ 4ರಿಂದ 3ಕ್ಕೆ ಇಳಿಕೆ ಮತ್ತು ಕಾಂಕ್ರೀಟು ಮನೆ ಚದರ ಮೀಟರಿಗೆ ರೂ 6ರಿಂದ 4ಕ್ಕೆ ಇಳಿಕೆ ಮಾಡುವುದಾಗಿ ತೆರಿಗೆ ಪರಿಷ್ಕರಣೆ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಸ್ಪಷ್ಟನೆ:
ಸರ್ಕಾರಿ ಸುತ್ತೋಲೆಯಂತೆ ಮನೆ ಪುನರ್ ಸರ್ವೆ ನಡೆಸಿ ಪರಿಷ್ಕೃತ ತೆರಿಗೆ ವಿಧಿಸಲಾಗಿದೆಯೇ ಹೊರತು ಯಾವುದೇ ರೀತಿಯ ತೆರಿಗೆ ಏರಿಕೆ ಮಾಡಿಲ್ಲ ಎಂದು ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಸ್ಪಷ್ಟಪಡಿಸಿದ್ದಾರೆ.

