ಮೂಡುಬಿದಿರೆ: ಅಕ್ರಮ ಗೋಸಾಗಾಟಗಾರರು ಪೊಲೀಸರ ಮೇಲೆ ಕಾರು ಹಾಯಿಸಿ, ಕೊಲೆಗೆ ಯತ್ನಿಸಿದ ಘಟನೆ ಶಿರ್ತಾಡಿ ಸಮೀಪದ ಪಡುಕೊಣಾಜೆಯಲ್ಲಿ ಗುರುವಾರ ನಸುಗಿನ ವೇಳೆ ಸಂಭವಿಸಿದೆ. ಘಟನೆ ಸಂದರ್ಭ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿಗಳ ಪರಾರಿಯಾಗಿದ್ದು, ಪೊಲೀಸರು ಕ್ವಾಲಿಸ್ ಜೀಪು, 7 ದನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ:
ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದಿಂದ ಶಿರ್ತಾಡಿ ಕಡೆಗೆ ವಾಹನದಲ್ಲಿ ಅಕ್ರಮ ಗೋಸಾಗಾಟ ಮಾಡುವ ಖಚಿತ ಮಾಹಿತಿಯ ಪ್ರಕಾರ ಮೂಡುಬಿದಿರೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಮೂವರು ಸಿಬ್ಬಂದಿಗಳು ಪಡುಕೊಣಾಜೆ ಕ್ರಾಸ್ನ ಬಳಿ ಗುರುವಾರ ಸುಮಾರು 4 ಗಂಟೆ ವೇಳೆಗೆ ವಾಹನ ತಪಾಸಣೆ ನಡೆಸಿದ್ದರು. ಕ್ವಾಲಿಸ್ನಲ್ಲಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪಡುಕೊಣಾಜೆ ಬಳಿ ಪೊಲೀಸರನ್ನು ಗಮನಿಸಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಮಾರೂರು ಕ್ರಾಸ್ ಬಳಿ ಎಸ್ಐ ದೇಜಪ್ಪ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದು, ಅಲ್ಲಿಗೆ ಬಂದ ಆರೋಪಿಗಳು ಮತ್ತೆ ಪಡುಕೊಣಾಜೆ ಕ್ರಾಸ್ನತ್ತ ತೆರಳಿದ್ದು, ಇನ್ಸ್ಪೆಕ್ಟರ್ ಪೊಲೀಸ್ ವಾಹನದ ಮೂಲಕ ಅಡ್ಡಗಟ್ಟಲು ಪ್ರಯತ್ನಿಸಿದರು. ಈ ವೇಳೆ ಕ್ವಾಲಿಸ್ನಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ಜೀಪು ಹಾಯಿಸಲು ಪ್ರಯತ್ನಿಸಿದ್ದು, ಪಕ್ಕದಲ್ಲಿರುವ ಚರಂಡಿ ಹಾರಿ ಪೊಲೀಸರು ಪ್ರಾಣ ಉಳಿಸಿಕೊಂಡಿದ್ದಾರೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿ ಆರೋಪಿಗಳ ತುಸು ದೂರ ಹೋಗುತ್ತಿದ್ದಂತೆ ಇನ್ಸ್ಪೆಕ್ಟರ್ ಒಂದು ಸುತ್ತಿನ ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿಗಳು ಕ್ವಾಲಿಸ್ನಿಂದ ಇಳಿದು, ಪಕ್ಕದಲ್ಲಿದ್ದ ಗದ್ದೆ ಮೂಲಕ ಪರಾರಿಯಾಗಿದ್ದಾರೆ.
ಪೊಲೀಸರು ಘಟನೆಯ ವೇಳೆ ಆರೋಪಿಗಳ ಚಹರೆಯನ್ನು ಸ್ಪಷ್ಟವಾಗಿ ಗಮನಿಸಿದ್ದಾರೆ. ವಶಪಡಿಸಿಕೊಳ್ಳಲಾದ ಕ್ವಾಲಿಸ್ನಲ್ಲಿ ಆರೋಪಿಗಳ ಬಳಸಿರುವ ಕೈಕವಚ, ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿ, ಕೊಲೆ ಯತ್ನ, ಕರ್ನಾಟಕ ಗೋಹತ್ಯೆ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

