ವಿಟ್ಲ: ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರನ್ನು ವಿಟ್ಲ ಪೋಲೀಸರು ಕರೋಪಾಡಿಯಲ್ಲಿ ಬಂಧಿಸಿದ್ದಾರೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ (63) ಅವರು ಬಂಧಿತ ಆರೋಪಿಯಾಗಿದ್ದಾರೆ. ಗುಡ್ಡದಲ್ಲಿ ಕಾಡು ಪ್ರಾಣಿಯನ್ನು ಕೊಲ್ಲುವ ಉದ್ದೇಶದಿಂದ ಸ್ಪೋಟಕವಿಟ್ಟು ಹಸುವನ್ನು ಹತ್ಯೆ ಮಾಡಿರುವುದರಲ್ಲಿ ಇವರ ಪಾತ್ರ ಇದೆ ಎಂಬ ದೂರಿನ ಹಿನ್ನಲೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಚೆಲ್ಲಂಗಾರು ಗುಡ್ಡದಲ್ಲಿ ಮಂಗಳವಾರ ರಾಧಾಕೃಷ್ಣ ಮೂಲ್ಯ ಅವರಿಗೆ ಸೇರಿದ 4ವರ್ಷದ ಹಸು ಒಪ್ಪಿ ಕಾಡೂ ಪ್ರಾಣಿ ಹತ್ಯೆಗಿಟ್ಟ ಸ್ಪೋಟಕ ಸಿಡಿದು, ದನದ ಮುಖ ಛಿದ್ರವಾಗಿ ಅಸುನೀಗಿತ್ತು. ದನದ ಸಾವಿನಿಂದ 20 ಸಾವಿರ ರೂ. ನಷ್ಟ ಸಂಭವಿಸಿರುವ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಪ್ರಾಣಿ ಹತ್ಯೆ ಯತ್ನ ಪ್ರಕರಣವೇ ಇಲ್ಲ:
ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬಾರದ ಪೋಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣದಲ್ಲಿ ಪ್ರಾಣಿ ಹತ್ಯೆಗೆ ಯತ್ನಿಸಿದ ಬಗ್ಗೆ ಯಾವುದೇ ಕಾಯ್ದೆಯ ಪ್ರಕಾರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಐಪಿಸಿ ಸೆಕ್ಷನ್ 286 ಪ್ರಕಾರ ನಿರ್ಲಕ್ಷ್ಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಊರ ಹಸುವಿನ ಮುಖ ಛಿದ್ರವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕರೋಪಾಡಿ ಗ್ರಾಮದ ಚೆಲ್ಲಂಗಾರುವಿನಲ್ಲಿ ಮಂಗಳವಾರ ನಡೆದಿದೆ. ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯ ಅವರಿಗೆ ಸೇರಿದ 4ವರ್ಷ ಹಸು ಒಪ್ಪಿ ನಿತ್ಯ ಗುಡ್ಡಕ್ಕೆ ತೆರಳಿ ಹಸಿ ಹುಲ್ಲು ಮೇದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಹಿಂತಿರುಗುತ್ತಿತ್ತು. ಸೋಮವಾರ ಬೆಳಗ್ಗೆ ಚೆಲ್ಲಂಗಾರು ಗುಡ್ಡಕ್ಕೆ ತೆರಳಿದ ದನ ಸಂಜೆಯಾದರೂ ಹಿಂತಿರುಗದ ಹಿನ್ನಲೆಯಲ್ಲಿ ರಾಧಾಕೃಷ್ಣ ಹಾಗೂ ಅವರ ತಾಯಿ ಅಪ್ಪಿ ಈಶ್ವರ ಮೂಲ್ಯ ಅವರು ಮೈದಾನದ ಭಾಗಕ್ಕೆ ಹೋಗಿ ಹುಡುಕಾಡುವ ಸಂದರ್ಭ ಮರದ ಕೆಳಗೆ ಮುಖ ಛಿದ್ರವಾಗಿ ರಕ್ತ ಇಳಿಸುತ್ತಾ ನಿಂತುಕೊಂಡಿರುವುದು ಕಾಣಿಸಿದೆ. ತಕ್ಷಣ ಮನೆಯವರ ಸಹಾಯದೊಂದಿಗೆ ಗುಡ್ಡದಿಂದ ಸುಮಾರು 1 ಕಿಮೀ ದೂರದಲ್ಲಿರುವ ಮನೆಗೆ ಕಡಿದಾದ ಹಾದಿಯಲ್ಲಿ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡಲಾಯಿತಾದರೂ ಕುತ್ತಿಗೆ ಹಾಗೂ ಬಾಯಿಯ ಭಾಗ ಸುಟ್ಟು ಸಿಡಿದು ಹೋದ ಹಿನ್ನಲೆ ಹಾಗೂ ತೀವ್ರ ರಕ್ತ ಸ್ರಾವದಿಂದ ಹಸು ತಡ ರಾತ್ರಿ 3 ಗಂಟೆ ಸುಮಾರಿಗೆ ಅಸುನೀಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣೆಯ ಪೋಲೀಸ್ ಸಹಾಯಕ ಉಪನಿರೀಕ್ಷಕ ಆನಂದ ಪೂಜಾರಿ, ಸಿಬ್ಬಂದಿಗಳಾದ ರಾಮಚಂದ್ರ, ರಮೇಶ, ಜಯಕುಮಾರ್, ಪ್ರವೀಣ್ ರೈ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡ್ಯನಡ್ಕ ಪಶು ವೈದ್ಯ ಪರಮೇಶ್ವರ ನಾಯ್ಕ ಅವರು ಶವ ಪರೀಕ್ಷೆ ನಡೆಸಿ, ಕೆಲವು ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲದ ಬಜರಂಗದಳದ ಮುಖಂಡ ಜಯಂತ ಸಿ.ಎಚ್., ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮತ್ತಿತರರು ಬೇಟಿ ನೀಡಿ ಮನೆಯವರಿಗೆ ಧೈರ್ಯ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಿ, ಸೂಕ್ತ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳೀಯರ ಮೇಲೆ ಗುಮಾನಿ:
ಪಾದೆಕಲ್ಲು – ಕುದುರಡ್ಕ ಹೋಗುವ ದಾರಿಯಲ್ಲಿ ಚೆಲ್ಲಂಗಾರು ಪದವು ಭಾಗವಿದೆ. ಇದು ಕೇರಳದ ಗಡಿ ಭಾಗದಲ್ಲಿದ್ದು, ಕಾಡು ಪ್ರಾಣಿಗಳ ಬೇಟೆಗೆ ಹಲವು ಮಂದಿ ಈ ನಿರ್ಜನ ಪ್ರದೇಶಕ್ಕೆ ಆಗಾಗ ಆಗಮಿಸುವ ಮಾಹಿತಿ ಇದೆ. ಈ ಹಿಂದೆ ಒಂದೆರಡು ಬಾರಿ ಕಾಡು ಹಂದಿ ಭೇಟೆ ನಡೆಸಿದ ಸ್ಥಳೀಯರ ಮೇಲೆ ಗುಮಾನಿಯಿದ್ದು, ಇವರಿಗೆ ಸ್ಫೋಟಕವನ್ನು ಒದಗಿಸಿದವರಾರು ಎಂಬ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ.

