ಕೋಲಾರ: ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಹಸಿರಾಗಿರುವಾಗಲೇ ಕರ್ನಾಟಕದ ಕೋಲಾರ ಜಿಲ್ಲೆಯ ಮತ್ತೋರ್ವ ಪೊಲೀಸ್ ಅಧಿಕಾರಿ ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
(ಚಿತ್ರ: ಸಂಗ್ರಹ)
42 ವರ್ಷದ ರಾಘವೇಂದ್ರ ಆತ್ಮಹತ್ಯೆಗೆ ಶರಣಾದ ಸರ್ಕಲ್ ಇನ್ಸ್ ಪೆಕ್ಟರ್. ಕಳೆದೊಂದು ವರ್ಷದಿಂದ ಮಾಲೂರಿನಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಸೋಮವಾರ ರಾತ್ರಿ ಯಾವುದೋ ರೈಡ್ಗೆ ಅಂತಾ ಹೊರಗೆ ಹೋಗಿ ಮಧ್ಯರಾತ್ರಿ ಪೊಲೀಸ್ ಠಾಣೆಗೆ ವಾಪಸ್ ಆಗಿದ್ದರು. ನಂತರ 2 ಗಂಟೆ ವೇಳೆಗೆ ಕುಳಿತಲ್ಲೇ ತನ್ನ ಸರ್ವಿಸ್ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಶೂಟ್ ಮಾಡಿಕೊಂಡ ತೀವ್ರತೆಗೆ ಬುಲೆಟ್ ತಲೆಯನ್ನು ಛೇದಿಸಿಕೊಂಡು ಹೊರಬಂದಿದೆ. ಕಿಟಕಿ ಗ್ಲಾಸ್ಗೂ ಬುಲೆಟ್ ತಗುಲಿದ್ದು, ಟೇಬಲ್ ಮೇಲೆಲ್ಲಾ ರಕ್ತ ಚೆಲ್ಲಾಡಿದೆ. ಟೇಬಲ್ ಮೇಲೆ ಪೇಪರ್ ಹಾಗೂ ಆ ಪೇಪರ್ ಮೇಲೆ ಮೊಬೈಲ್ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ರಾಘವೇಂದ್ರ ಅವರು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದು, ಬಳಿಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದ ರಾಘವೇಂದ್ರ ಅವರು ಮೂಲತಃ ವೇಮಗಲ್ ನ ನರಸಾಪುರ ಮೂಲದವರೆಂದು ತಿಳಿದುಬಂದಿದೆ. 2003ನೇ ಬ್ಯಾಚ್ ನ ಅಧಿಕಾರಿಯಾಗಿದ್ದ ರಾಘವೇಂದ್ರ ಅವರು ಈ ಹಿಂದೆ ಸರ್ಜಾಪುರ ನಂದಗುಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಘವೇಂದ್ರ ಕಳೆದ 2012, 2013, 2014 ರಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದಷ್ಟೇ ರಾಘವೇಂದ್ರ ಅವರು ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಭಢ್ತಿ ಪಡೆದಿದ್ದರು.
ಮರಳು ಮಾಫಿಯಾ ಹಾಗೂ ಮೇಲಾಧಿಕಾರಿಗಳಿಂದ ಒತ್ತಡವಿತ್ತು ಎಂಬ ಮಾತುಗಳು ಕೇಳಿಬಂದಿವೆಯಾದರೂ, ರಾಘವೇಂದ್ರ ಅವರಿಗೆ ಕೌಟಂಬಿಕ ಸಮಸ್ಯೆಗಳಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿವೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡಿರುವ ರಾಘವೇಂದ್ರ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಇಸ್ಪೀಟ್ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಇನ್ಸ್ ಪೆಕ್ಟರ್ ರಾಘವೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. 2014 ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದ ನಂತರ ಒಂದು ವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ನಂತರ ಲೋಕಾಯುಕ್ತ ಪ್ರಕರಣದಿಂದ ಮುಕ್ತರಾದ ಮೇಲೆ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕೆಲಸದ ಒತ್ತಡ ಹಾಗೂ ಯಾವುದಾದರು ಮಾಫಿಯಾದ ಬೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕೆ ಮೇಲೆ ತನಿಖೆ ಮುಂದುವರೆದಿದೆ. ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಎಸ್ಪಿ ದಿವ್ಯಾ, ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದಿದ್ದಾರೆ. ರಾಘವೇಂದ್ರ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಠಾಣೆ ಮುಂದೆ ಜಮಾಯಿಸಿದ್ದಾರೆ. ಮೃತ ರಾಘವೇಂದ್ರ ಅವರ ಬಂಧುಗಳು ಠಾಣೆಗೆ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ :
ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ಮುಂಜಾನೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಠಾಣೆಯ ಎಲ್ಲಾ ಸಿಬ್ಬಂದಿಯ ಬಳಿ ಹೇಳಿಕೆ ಪಡೆಯಲಾಗಿದೆ. ಮೃತ ರಾಘವೇಂದ್ರ ಒಳ್ಳೆಯ ಅಧಿಕಾರಿ ಆಗಿದ್ದರು. ಎಸ್ಪಿ ದಿವ್ಯಾ ಸಹ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

