ಬಂಟ್ವಾಳ: : ಕಾಡುಪ್ರಾಣಿಯೊಂದನ್ನು ಹುಲಿ, ಚಿರತೆ ಎಂದುಕೊಂಡು ಗ್ರಾಮಸ್ಥರು ಭಯಗೊಂಡ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಕಲಾಬಾಗಿಲು ಸಮೀಪದ ಸೇವಾ ಎಂಬಲ್ಲಿ ಸಂಭವಿಸಿದ್ದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರಿಂದ ಕಾಡು ಹಂದಿ ಎಂಬ ಮಾಹಿತಿ ದೊರೆತಿದೆ.
ಇಲ್ಲಿನ ಮಹಿಳೆಯೊಬ್ಬರು ಬೆಳಗ್ಗೆ ತಮ್ಮ ಮನೆ ಪಕ್ಕದ ಕಾಡಿನಲ್ಲಿ ಸಿಂಹವನ್ನು ಹೋಲುವ ದೊಡ್ಡ ಪ್ರಾಣಿಯನ್ನು ಕಂಡದ್ದಾಗಿ ಗುಲ್ಲೆಬ್ಬಿಸಿದರು. ಸ್ಥಳೀಯರು ಪರಿಶೀಲಿಸಿದಾಗ ಪ್ರಾಣಿಯ ಹೆಜ್ಜೆಗುರುತು ಕಂಡುಬಂದಿತ್ತು. ಕೆಲವರು ಅದು ಹುಲಿಯದ್ದೆಂದು ಇನ್ನು ಕೆಲವರು ಚಿರತೆಯದ್ದಾಗಿರಬೇಕೆಂದು ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಸ್ಥಳೀಯ ಗ್ರಾ.ಪಂ.ಸದಸ್ಯ ಶಂಕರ ಶೆಟ್ಟಿ ಬೆದ್ರಮಾರ್ ಅವರು ತತ್ಕ್ಷಣ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಈ ಹೊತ್ತಿಗೆ ಜನಸ್ತೋಮ ಸೇರಲಾರಂಭಿಸಿತು. ಪುಂಜಾಲಕಟ್ಟೆ ಠಾಣಾಕಾರಿ ಲತೇಶ್ ಕುಮಾರ್ ಡಿ.ಕೆ. ಮತ್ತು ಅವರ ಸಿಬಂದಿಗಳು ಹಾಗೂ ಅರಣ್ಯಾಕಾರಿ ಮ್ಯಾಥ್ಯೂ ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿದರು. ಪರಿಶೀಲನೆ ನಡೆಸಿದ ಅರಣ್ಯಾಕಾರಿ ಮ್ಯಾಥ್ಯೂ ಅವರು ಇದು ಕಾಡು ಹಂದಿಯ ಹೆಜ್ಜೆಗುರುತಾಗಿದ್ದು ಮಣ್ಣಿನಲ್ಲಿ ಹೊರಳಾಡಿದ ಕಾಡುಹಂದಿ ಹುಲಿಯಂತೆ ಕಂಡಿರಬೇಕೆಂದು ಹೇಳಿದ್ದಾರೆ. ಈ ಪರಿಸರದಲ್ಲಿ ಹುಲಿ ಬರುವ ಸಾಧ್ಯತೆ ಇಲ್ಲ ಎಂದ ಅವರು ಚಿರತೆಯಂತಹ ಪ್ರಾಣಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಈ ಪರಿಸರದಲ್ಲಿ ರಬ್ಬರ್ ತೋಟ, ಗಿಡಗಂಟಿ, ಮುಳ್ಳಿನ ಪೊದರು ತುಂಬಿದ್ದು ಸ್ಥಳೀಯರು ಹಾಗೂ ಮಕ್ಕಳು ಇಲ್ಲಿಯ ದಾರಿಯಲ್ಲಿ ಸಂಚರಿಸುತ್ತಾರೆ. ಇದೀಗ ಕಾಡು ಪ್ರಾಣಿಗಳ ಇರುವಿಕೆಯ ಅನುಮಾನದಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

By suddi9

Leave a Reply

Your email address will not be published. Required fields are marked *