ಬಂಟ್ವಾಳ : ಕೊನೆಗೂ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬಿ ಸಿ ರೋಡಿಗೆ ದೌಡಾಯಿಸಿದ್ದು, ಚರಂಡಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಹೆದ್ದಾರಿ ಅಗೆತ ಕಾರ್ಯ ಕೈಗೊಂಡಿದ್ದಾರೆ.
ಇಲ್ಲಿನ ಗಣೇಶ್ ಮೆಡಿಕಲ್ ಎದುರುಗಡೆ ಇರುವ ಚರಂಡಿಯಲ್ಲಿ ಹೂಳು ತುಂಬಿದ ಪರಿಣಾಮ ಕಳೆದ ವಾರ ಎರಡು-ಮೂರು ಬಾರಿ ಮಳೆ ಹಾಗೂ ಕೊಳಚೆ ಮಿಶ್ರಿತ ಚರಂಡಿ ನೀರು ಹೆದ್ದಾರಿಯಲ್ಲೇ ಹರಿದು ವಾಹನ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಸಾಕಷ್ಟು ಬಾರಿ ಪುರಸಭೆಗೆ ಮನವಿ ಸಲ್ಲಿಸಿಯೂ ಫಲಪ್ರದವಾಗದ ಹಿನ್ನಲೆಯಲ್ಲಿ ಕಳೆದ ವಾರ ತಾಲೂಕು ತಹಶೀಲ್ದಾರ್ ಬಿ ಎಸ್ ಮಲ್ಲೆಸ್ವಾಮಿಗೂ ಮನವಿ ನೀಡಿ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದ್ದರಲ್ಲದೆ ತಪ್ಪಿದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು. ಸಾರ್ವಜನಿಕ ಮನವಿಗೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಹೆದ್ದಾರಿ ಇಲಾಖೆ ಹಾಗೂ ಪುರಸಭಾ ಇಂಜಿನಿಯರ್ಗಳಿಗೆ ಸುದ್ದಿ ರವಾನಿಸಿ ಚರಂಡಿ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಲ್ಲದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದಲ್ಲಿ ಮುಂದಾಗುವ ಅನಾಹುತಗಳಿಗೆ ನೇರ ಹೊಣೆ ಮಾಡುವುದಾಗಿ ಎಚ್ಚರಿಸಿ ನಿದರ್ೇಶನ ನೀಡಿದ್ದರು.
ತಹಶೀಲ್ದಾರ್ ಎಚ್ಚರಿಕೆಯಿಂದ ಎಚ್ಚೆತ್ತ ಇಂಜಿನಿಯರ್ಗಳು ಕಳೆದ ವಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮುಂದಿನ ವಾರ ಹೆದ್ದಾರಿ ಅಗೆದು ಪರಿಹಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದರಂತೆ ಸೋಮವಾರ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಉದಯ ಕುಮಾರ್, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ ಸ್ಥಳದಲ್ಲಿ ಉಪಸ್ಥಿತರಿದ್ದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯರಾದ ಬಿ ಮೋಹನ್, ಸದಾಶಿವ ಬಂಗೇರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮೇಲ್ಸೇತುವೆಯ ತುಂಡಾಗಿ ನೇತಾಡುತ್ತಿರುವ ಪೈಪ್ಗಳನ್ನೂ ದುರಸ್ತಿ ಪಡಿಸುವುದಾಗಿ ಇಂಜಿನಿಯರ್ ಉದಯ ಕುಮಾರ್ ತಿಳಿಸಿದ್ದಾರೆ.
ಪೊಲೀಸರೊಂದಿಗೆ ಚಕಮಕಿ
ಸೋಮವಾರದ ನಿಬಿಡತೆಯ ನಡುವೆಯೂ ಬೆಳಿಗ್ಗೆಯೇ ಹೆದ್ದಾರಿ ಅಗೆತ ಕಾಮಗಾರಿ ಕೈಗೊಂಡ ಹೆದ್ದಾರಿ ಪ್ರಾಧಿಕಾರ ಇಂಜಿನಿಯರ್ ಕ್ರಮವನ್ನು ತರಾಟೆಗೆ ತೆಗೆದುಕೊಂಡ ನಗರ ಠಾಣಾಧಿಕಾರಿ ನಂದಕುಮಾರ್ ಇಂಜಿನಿಯರ್ ಉದಯಕುಮಾರ್ ಅವರೊಂದಿಗೆ ಮಾತಿನ ವಿನಿಮಯ ನಡೆಸಿದ್ದಾರೆ. ಸೋಮವಾರ ಡಿಫಿ ವತಿಯಿಂದ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಯಲಿದ್ದ ಹಿನ್ನಲೆಯಲ್ಲಿ ಇದ್ದ ಪೊಲೀಸ್ ಬಲವನ್ನು ಅಲ್ಲಿಗೆ ರವಾನಿಸಿದ ಪರಿಣಾಮ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದುದರಿಂದ ಎಸ್ಸೈ ಈ ರೀತಿ ಗರಂ ಆಗಿದ್ದಾರೆ ಎನ್ನಲಾಗಿದೆ. ನಿನ್ನೆ ಶುಭ ಸಮಾರಂಭಗಳು ಕಡಿಮೆ ಇದ್ದುದರಿಂದ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಹಿನ್ನಲೆಯಲ್ಲಿ ವಿಶೇಷ ಟ್ರಾಫಿಕ್ ಜಾಂ ಉಂಟಾಗಲಿಲ್ಲ.
