ಬಂಟ್ವಾಳ: ಅಧಿಕಾರಿಗಳು ಹಾಗೂ ಜನರ ನಡುವಿನ ಅಂತರವನ್ನು ಕಡಿಮೆ ಮಾಡಿ, ಸರ್ಕಾರಿ ಸವಲತ್ತುಗಳು ಜನರಿಗೆ ಸುಲಭದಲ್ಲಿ ತಲುಪಲು ಕಂದಾಯ ಅದಾಲತ್ ಗಳಿಂದ ಸಾಧ್ಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು. ಮೆಲ್ಕಾರ್ ನ ಬಿರ್ವ ಅಡಿಟೋರಿಯಂನಲ್ಲಿ ಗುರುವಾರ ನಡೆದ ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ, ಕಾರ್ಯಾಂಗ ವ್ಯವಸ್ಥೆ ಚುರುಕುಗೊಂಡು ಸರ್ಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯ ಎಂದ ಅವರು, ಸರ್ಕಾರಿ ಸವಲತ್ತು ಪಡೆಯಲು ನಾಗರೀಕರ ಸ್ವಪ್ರಯತ್ನವೂ ಅಗತ್ಯ ಎಂದರು.
ಮಂಗಳೂರು ಸಹಾಯಕ ಆಯುಕ್ತ ಆರ್.ಅಶೋಕ್ ಸಭಾಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಪಹಣಿ ಪತ್ರಗಳಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ನಮ್ಮ ಗಮನಕ್ಕೆ ತನ್ನಿ ಕಂದಾಯ ಅದಾಲತ್ ಕಾರ್ಯಕ್ರಮಗಳ ಮೂಲಕ ಅವುಗಳನ್ನು ತಕ್ಷಣ ಸರಿಪಡಿಸಲು ಅವಕಾಶ ಇದೆ. ಕಂದಾಯ ಅದಾಲತ್ ಮೂಲಕ ಶೇ. 50ಕ್ಕಿಂತಲೂ ಹೆಚ್ಚಿನ ಕಡತಗಳನ್ನು ವಿಲೇ ಮಾಡಲಾಗಿದೆ. ಪ್ರತೀ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸಿ ಜನರ ಪಹಣಿ ಹಾಗೂ ಪಿಂಚಣಿ ಕಡತಗಳ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಎಂ.ಎಸ್.ಮಹಮ್ಮದ್ ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸದಸ್ಯರಾದ ಸಂಜೀವ ಪೂಜಾರಿ, ಗಣೇಶ್ ಸುವರ್ಣ ತುಂಬೆ, ಯಶವಂತ ಪೊಳಲಿ, ಮಂಜುಳಾ, ಬೇಬಿ, ರತ್ನಾವತಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ , ಇರಾ ಗ್ರಾ.ಪಂ.ಅಧ್ಯಕ್ಷ ರಝಾಕ್ ಇರಾ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್, ನರಿಂಗಾನ ಗ್ರಾ.ಪಂ.ಅಧ್ಯಕ್ಷ ಇಸ್ಮಾಯಿಲ್, ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೇಟ್ಟು, ಕರಿಯಂಗಳ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ, ಸಂಗಬೆಟ್ಟು, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ವೇದಿಕೆಯಲ್ಲಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮ, ದಿವಾಕರ , ತೌಫಿಕ್, ಎ.ಪಿ.ಭಟ್, ಬಸಪ್ಪ, ರಾಜಶೇಖರ, ಶಿವಪ್ಪ, ಪ್ರದೀಪ, ಜ್ಯೋತಿಬಾಯಿ, ಯೋಗಾನಂದ, ಮಮತಾ, ಪ್ರಶಾಂತ, ಸದಾನಂದ ಮತ್ತಿತರು ಹಾಜರಿದ್ದರು. ಕಾರ್ಯಕ್ರಮದಲ್ಲಿ 38 ಸಂಧ್ಯಾ ಸುರಕ್ಷಾ, 36 ವಿಧವಾ ವೇತನ, 12 ಅಂಗವಿಕಲ ವೇತನ, 7 ಮನಸ್ವಿನಿ ಹಾಗೂ ಇಬ್ಬರಿಗೆ ವಿಧವಾ ವೇತನ ಸೇರಿದಂತೆ 95 ಫಲಾನುಭವಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪಹಣಿ ಪತ್ರದಲ್ಲಿನ ಲೋಪದೋಷಗಳ ಕುರಿತು ಪರಿಶೀಲನೆ ನಡೆಸಲಾಯಿತು.

