ಮಂಗಳೂರು: ನಗರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿದೆ. ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ.


ಕುದ್ರೋಳಿ ಕ್ಷೇತ್ರವು ಸುಣ್ಣ ಬಣ್ಣಗಳಿಂದ ಹೊಸ ಮೆರುಗನ್ನು ಪಡೆದಿದೆ ಹಾಗೂ ವಿದ್ಯುತ್ ದೀಪಗಳೊಂದಿಗೆ ಅಲಂಕಾರಗೊಂಡಿದ್ದು, ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ಕಲ್ಯಾಣ ಮಂಟಪವೂ ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ಶೈಲಿಯ ಆಕರ್ಷಕ ಹೊಸ ವಿನ್ಯಾಸದಲ್ಲಿ ಅಲಂಕಾರಗೊಂಡಿದೆ. ಮಂಗಳೂರು ದಸರಾದ ದರ್ಬಾರ್ ಮಂಟಪದಲ್ಲಿ ಶಾರದಾ ಮಾತೆ ಪ್ರತಿಷ್ಠಾಪಿಸಲ್ಪಡುವ ವೇದಿಕೆಯು ಸಂಪೂರ್ಣ ಅಕ್ರೆಲಿಕ್ ವರ್ಣಾಲಂಕಾರದ ಜೊತೆಗೆ ಬಣ್ಣ ಬಣ್ಣದ ವಿದ್ಯತ್ ದೀಪಗಳ ಆಕರ್ಷಣೆಯೊಂದಿಗೆ ವೀಕ್ಷಕರಿಗೆ ಮಂಗಳೂರು ದಸರಾದ ಹೊಸ ಅನುಭವವನ್ನು ನೀಡಲಿದೆ.






















