ಮಂಗಳೂರು: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿಯಮಿತ ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 18-09-2016ರಂದು ಆದಿತ್ಯವಾರ ಹೊಟೇಲ್ ಶ್ರೀನಿವಾಸ ಇದರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಡಿ’ಸೋಜ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಆರಂಭದಲ್ಲಿ ಈ ಸಂಘಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು, ನಿರ್ದೇಶಕರಗಳನ್ನು ಹಾಗೂ ಭಾಗವಹಿಸಿದ ಸರ್ವ ಸದಸ್ಯರನ್ನು ಅವರು ಸ್ವಾಗತಿಸಿದರು.
ಸಂಘವು 1989ರಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ 3854 ಮಂದಿ ಸದಸ್ಯರಿದ್ದು ದ.ಕ. ಜಿಲ್ಲಾ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಘವು ವರದಿ ಸಾಲಿನಲ್ಲಿ ರೂ. 44 ಕೋಟಿಯಷ್ಟು ದುಡಿಯುವ ಬಂಡವಾಳ ಹೊಂದಿರುತ್ತದೆ. ಸಂಘವು ಬ್ರಹ್ಮಾವರದಲ್ಲಿ ಒಂದು ಶಾಖೆ ಮತ್ತು “ಶಿಕ್ಷಕ್” ಹೆಸರಿನ ಪುಸ್ತಕ ಮಾರಾಟ ಮಳಿಗೆಯನ್ನು ಹೊಂದಿದೆ.
ಪ್ರಸ್ತುತ ಸಂಘದಲ್ಲಿ ರೂ. 4.48 ಕೋಟಿ ಪಾಲುಬಂಡವಾಳ ಹಾಗೂ ರೂ. 33.58 ಕೋಟಿ ಠೇವಣಿ ಇದ್ದು ವರದಿ ವರ್ಷದಲ್ಲಿ ಸದಸ್ಯರಿಗೆ ನೀಡಿದ ಒಟ್ಟು ಸಾಲ ರೂ 19.34 ಕೋಟಿ ಆಗಿರುತ್ತದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ಪ್ರಾರಂಭದಿಂದ ಈ ವರೆಗೆ “ಎ” ತರಗತಿ ಪಡೆಯುತ್ತಿದೆ. ಸಂಘದ ಪ್ರಸ್ತುತ ಸಾಲಿನಲ್ಲಿ ಒಟ್ಟು ರೂ. 111 ಕೋಟಿ ವಾರ್ಷಿಕ ವ್ಯವಹಾರ ನಡೆಸಿರುತ್ತದೆ.
2015-16ನೇ ಸಾಲಿನಲ್ಲಿ ಸಂಘವು ರೂ. 1,22,84,095 ದಾಖಲೆಯ ನಿವ್ವಳ ಲಾಭವನ್ನು ಗಳಿಸಿದ್ದು ಸಂಘದ ಸದಸ್ಯರಿಗೆ ಶೇ 20 ಡಿವಿಡೆಂಡ್ ನೀಡಲಾಗುವುದೆಂದು ಅಧ್ಯಕ್ಷರು ಘೋಷಿಸಿದರು. ಕಾರ್ಯಯೋಜನೆಯಲ್ಲಿ ಮುಂದಿನ ಅವಧಿಗೆ ಸಂಘದ ಠೇವಣಿಯನ್ನು ಹೆಚ್ಚಳಗೊಳಿಸುವುದು, ಸದಸ್ಯರಿಗೆ ನೀಡುವ ಸಾಲದಲ್ಲಿ ಹೆಚ್ಚಳ, ಸಂಘದ ಸದಸ್ಯರಿಗೆ ಕ್ಷೇಮನಿಧಿ/ಮರಣೋತ್ತರ ಪರಿಹಾರ ನಿಧಿ ಸ್ಥಾಪನೆ, ಸದಸ್ಯರ ಅನುಕೂಲಕ್ಕಾಗಿ ಬೆಳ್ತಂಗಡಿ, ಪುತ್ತೂರಿನಲ್ಲಿ ಶಾಖೆಯನ್ನು ತೆರೆಯುವುದು, ಗೃಹ ಸಾಲ, ಶೈಕ್ಷಣಿಕ ಸಾಲ, ವಾಹನ ಖರೀದಿ ಸಾಲಗಳ ಬಗ್ಗೆ ಮುಂದಿನ ಗುರಿಗಳನ್ನು ಮಹಾಸಭೆಗೆ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘಕ್ಕೆ ಸ್ವಂತ ಜಾಗ ಖರೀದಿಯ ಬಗ್ಗೆಯು ಮಹಾಸಭೆಗೆ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸಂಘದ ಸದಸ್ಯರಾದ ಕು| ಶಕುಂತಲಾ ಎಸ್. ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಕೆ.ಎಂ.ಕೆ ಮಂಜನಾಡಿಯವರು ಧನ್ಯವಾದವಿತ್ತರು. ಸಂಘದ ನಿರ್ದೇಶಕರುಗಳಾದ ಶ್ರೀ ಸಿ. ಪ್ರಭಾಕರ ಶೆಟ್ಟಿ (ಸ್ಥಾಪಕ ಅಧ್ಯಕ್ಷರು), ಶ್ರೀ ರಾಮಶೇಷ ಶೆಟ್ಟಿ, ಶ್ರೀಮತಿ ಬಿ. ರಜನಿ, ಶ್ರೀ ಉದಯಶಂಕರ್ ನಾಯ್ಕ್ ಟಿ., ಶ್ರೀ ಚಂದ್ರಶೇಖರ ಅಡಿಗ, ಶ್ರೀಮತಿ ಚಂಚಲಾಕ್ಷಿ ಎಚ್., ಶ್ರೀ ಪಿ. ದೇವಪ್ಪ ಶೆಟ್ಟಿ, ಶ್ರೀ ವಿನ್ಸೆಂಟ್ ಸ್ಯಾಮುವೆಲ್ ಕರ್ಕಡ, ಶ್ರೀಮತಿ ರವಿಕಲಾ ಶೆಟ್ಟಿ, ಶ್ರೀ ಅಮರು ಹರಿಸಿಂಗ ಲಮಾಣಿ, ಶ್ರೀ ಮೊಹಮ್ಮದ್ ಹುಸೈನ್ ಮಲಾರ್, ಶ್ರೀ ಸುರೇಶ್ ರಾವ್ ಬಿ., ಶ್ರೀ ಶಂಕರ್ ಎ., ಶ್ರೀಮತಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಶ್ರೀ ವಸಂತ ಕೆ., ಡಾ| ಹಮೀದ್ ಪಿ. ಎಚ್., ಶ್ರೀ ಪುಟ್ಟಸ್ವಾಮಿ ಆರ್., ಹಾಗೂ ನಾಮ ನಿರ್ದೇಶಿತ ನಿರ್ದೇಶಕರಾದ ಶ್ರೀ ದಯಾನಂದ ಪಾಟಾಳಿ ಕೆ, ಶ್ರೀ ರಾಮದಾಸ ಕೆ. ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಉಮೇಶ್ ಕೆ., ಉಪಸ್ಥಿತರಿದ್ದರು. ಈ ಮಹಾಸಭೆಗೆ 900 ಸದಸ್ಯರು ಭಾಗವಹಿಸಿದ್ದು ಒಂದು ದಾಖಲೆಯಾಗಿದ್ದು ಹಾಜರಿದ್ದ ಸರ್ವ ಸದಸ್ಯರಿಗೂ ವಿಶೇಷ ಉಡುಗೊರೆಯನ್ನು ನೀಡಲಾಯಿತು. ಭೋಜನದೊಂದಿಗೆ ಅಂದಿನ ಮಹಾಸಭೆಯು ಮುಕ್ತಾಯವಾಯಿತು.

