ಬಂಟ್ವಾಳ: ಈಗಾಗಲೇ ಹಕ್ಕುಪತ್ರ ನೀಡಿ ಪಹಣಿ ದಾಖಲೆಯಾಗಿರುವ ಜಮೀನುಗಳಿಗೆ 94ಸಿ ಅಡಿ ಹಕ್ಕುಪತ್ರ ನೀಡಲು ಮುಂದಾಗಿರುವ ಇರಾ ಗ್ರಾಮ ಪಂಚಾಯತ್‍ನ ಕಾರ್ಯವೈಖರಿ ಬಗ್ಗೆ ಗ್ರಾಮದ ಎರಡನೇ ವಾರ್ಡ್‍ನ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಈ ಸಂಬಂಧ ವಾರ್ಡ್ ನಿವಾಸಿ ಸುಲೈಮಾನ್ ಎಂಬವರು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಪಂಚಾಯತ್‍ನ ಗೋಲ್‍ಮಾಲ್ ಬಯಲಿಗೆಳೆದಿದ್ದಾರೆ.

????

ಇರಾ ಗ್ರಾಮದ ಗೇರುಪಡ್ಪು ಮತ್ತು ಕುಕ್ಕಾಜೆ ಸೈಟ್ ಎಂಬಲ್ಲಿನ ಸರ್ವೇ ನಂಬ್ರ 115/2 ಮತ್ತು 119/1ರಲ್ಲಿ 45 ಮಂದಿ ಫಲಾನುಭವಿಗಳು 1972-73ರಲ್ಲಿ ಹಕ್ಕು ಪತ್ರ ಪಡೆದಿದ್ದು ಬಳಿಕ ಕಾನೂನು ಬದ್ಧವಾಗಿ ದಾಖಲೆಯನ್ನು ಮಾಡಿಕೊಂಡಿರುತ್ತಾರೆ. ಇದೀಗ ಅದೇ ಜಮೀನಿಗೆ ಹಕ್ಕುಪತ್ರ ನೀಡುವ ಬಗ್ಗೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಎರಡನೆ ವಾರ್ಡ್ ಸದಸ್ಯರು ಮನೆ ಮನೆಗಳಿಗೆ ಭೇಟಿ ನೀಡಿ ಈ ಹಿಂದಿನ ಜಮೀನಿನ ಹಕ್ಕು ಪತ್ರ ಸಹಿತ ದಾಖಲೆಗಳನ್ನು ವಾಪಸ್ ಪಡೆದು ಹೊಸ ಹಕ್ಕುಪತ್ರಕ್ಕೆ ಫಲಾನುಭವಿಗಳಿಂದ ಬಲವಂತವಾಗಿ ಅರ್ಜಿ ಹಾಗೂ ತಲಾ 5,000 ರೂಪಾಯಿಯಂತೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2009ರಲ್ಲಿ ಮಂಜೂರಾತಿ ಶರತ್ತು ಉಲ್ಲಂಘಿಸಿ 45 ಮನೆಗಳ ನಿವೇಶನದ ಮಂಜೂರಾತಿ ರದ್ದು ಪಡಿಸಿರುವುದಾಗಿ ಕಂದಾಯ ನಿರೀಕ್ಷಕರು ನಡಾವಳಿಯೊಂದನ್ನು ನೀಡಿದ್ದಾರೆ. ಈ ಕುರಿತಾಗಿ 2013ರಲ್ಲಿ ಮಾಹಿತಿ ಹಕ್ಕಿನಡಿ ಪಡೆಯಲಾದ ತಹಶೀಲ್ದಾರರ ವಿವರಣೆಯಂತೆ ಕಡತ ಪರಿಶೀಲಿಸಿದ್ದು ನಿವೇಶನ ಹಕ್ಕು ಪತ್ರ ರದ್ದುಗೊಂಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆ ಬಳಿಕ 45 ಫಲಾನುಭವಿಗಳ ಪೈಕಿ ಕೆಲವರು ಇದೇ ದಾಖಲಾತಿಯನ್ನು ಇಟ್ಟು ಬ್ಯಾಂಕ್‍ನಿಂದ ಸಾಲವನ್ನು ಕೂಡಾ ಪಡೆದಿರುತ್ತಾರೆ ಎಂದು ಹೇಳಿದ ಅವರು ಇದೀಗ ಇರಾ ಪಂಚಾಯತ್ ನಿವೇಶನ ಮಂಜೂರಾತಿ ರದ್ದಾಗಿದೆ ನಿಮಗೆ ಹೊಸ ಹಕ್ಕು ಪತ್ರ ನೀಡುತ್ತೇವೆ ಎಂದು ಗ್ರಾಮಸ್ಥರನ್ನು ವಂಚಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಗೊಂದಲಕ್ಕೊಳಗಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಲಾಗಿದೆ ಎಂದರು.

ಬೆದರಿಕೆ: ಈ ಕುರಿತಂತೆ ಸ್ಪಷ್ಟನೆ ಕೇಳಲು ಹೋದ ಗ್ರಾಮಸ್ಥರಿಗೆ ಪಂಚಾಯತ್ ಅಧ್ಯಕ್ಷ ಹಾಗೂ ವಾರ್ಡ್ ಎರಡರ ಜನಪ್ರತಿನಿಧಿಗಳು ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ ಅವರು ಈ ಬೋಗಸ್ ಹಕ್ಕುಪತ್ರ ವಿತರಣೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದರು.

ಈ ಸಂಬಂಧವಾಗಿ 2011ರಲ್ಲಿ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿದ್ದು ನಿವೇಶನದಾರರು ಕಾಯ್ದಿರಿಸಿದ ನಿವೇಶನ ಸ್ಥಳದಲ್ಲೇ ವಾಸ್ತವ್ಯವಿರುವುದರಿಂದ ಇದನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬಂದಿತ್ತಲ್ಲದೆ ಫಲಾನುಭವಿಗಳನ್ನು ತೆರವುಗೊಳಿಸದಂತೆ ಕಂದಾಯ ಇಲಾಖೆಗೆ ಸೂಚಿಸಿ ನಿರ್ಣಯ ಕೈಗೊಂಡಿತ್ತು ಎಂದು ಅವರು ದಾಖಲಾತಿಯ ಸಹಿತ ವಿವರಿಸಿದರು.

ಪಂಚಾಯತ್ ಅಧ್ಯಕ್ಷರೇ ಮನೆ ಮನೆಗೆ ಭೇಟಿ ನೀಡಿ ಹಕ್ಕು ಪತ್ರವೊಂದಿರುವ ಮನೆಗಳಿಗೆ ಮತ್ತೆ ಹೊಸದಾಗಿ ಹಕ್ಕು ಪತ್ರ ನೀಡಲು ಮುತ್ತುವರ್ಜಿ ವಹಿಸಿರುವುದು ಯಾಕಾಗಿ ಎಂದು ನಮಗೆ ತಿಳಿದಿಲ್ಲ. ಇದು ಕಾನೂನಿಗೆ ವಿರೋಧವಾದರೂ ಪಂಚಾಯತ್, ಕಂದಾಯ ಅಧಿಕಾರಿಗಳು ಕೂಡಾ ಇದಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಸುಲೈಮಾನ್ ಆರೋಪಿಸಿದರು. ಫಲಾನುಭವಿ ಹಾಜಿ ಬ್ಯಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *