ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆ ಪ್ರಕೃತಿ ಸೌಂದರ್ಯ ಪ್ರದೇಶಲ್ಲಿ ಸುಸಜ್ಜಿತ ಕಟ್ಟಡ ಮತ್ತು ವಿದ್ಯಾರ್ಥಿನಿ ನಿಲಯ ಸಹಿತ ನಿರ್ಮಾಣಗೊಂಡಿರುವ ಸರ್ಕಾರಿ ಪಾಲಿಟೆಕ್ನಿಕ್ ಮೂಲಕ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆದು ಕಾಲೇಜು ಮಾತ್ರವಲ್ಲದೆ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರಂತೆ ದೇಶಕ್ಕೆ ಮಹತ್ತರ ಕೊಡುಗೆ ಸಲ್ಲಿಸುವ ತಂತ್ರಜ್ಞರಾಗಿ ಮೂಡಿ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸಿವಿಲ್ ವಿದ್ಯಾರ್ಥಿಗಳ ಸಂಘ (ಸ್ಯಾಕ್) ಇದರ ವತಿಯಿಂದ ಗುರುವಾರ ನಡೆದ ‘ಎಂಜಿನಿಯರ್ಸ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಇಲ್ಲಿನ ಸಿವಿಲ್ ವಿಭಾಗದ ಹಳೆ ವಿದ್ಯಾರ್ಥಿಗಳು ಕೊಡುಗೆ ನೀಡಿದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

ಪ್ರಾಂಶುಪಾಲ ದೇವರಾಜ್ ನಾಯ್ಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಪ್ರಾಂಶುಪಾಲ ಡಾ.ಎಚ್.ಸಿ.ಚಿನ್ನಗಿರಿ ಗೌಡ ಮಾತನಾಡಿ, ಸತ್ಯವನ್ನು ಸುಳ್ಳು ಮತ್ತು ಸುಳ್ಳನ್ನು ಸತ್ಯ ಮಾಡುವ ಪ್ರಸಕ್ತ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದರು.
ಸ್ಥಳೀಯ ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಮಂಗಳೂರು ವೃತ್ತ ಪಿಡಬ್ಲ್ಯುಡಿ ಸುಪರಿಡೆಂಟ್ ಎಂಜಿನಿಯರ್ ಬಿ.ಟಿ.ಕಾಂತರಾಜ, ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್ ಮತ್ತಿತರರು ಶುಭ ಹಾರೈಸಿದರು. ಸಹಾಯಕ ಎಂಜಿನಿಯರ್ ಚಿದಂಬರ ಸ್ವಾಮಿ, ಪ್ರೀತಂ, ಅರುಣ್ ಪ್ರಕಾಶ್, ಕಾಂಗ್ರೆಸ್ ಮುಖಂಡ ಬಿ. ಎಚ್. ಖಾದರ್ ಮತ್ತಿತರರು ಇದ್ದರು. ವಿದ್ಯಾರ್ಥಿನಿ ಸುಮಲತಾ ಸ್ವಾಗತಿಸಿ, ವಿದ್ಯಾರ್ಥಿ ಸಫಾಫ್ ವಂದಿಸಿದರು. ಉಪನ್ಯಾಸಕ ನವೀನ್ ಜಿ. ಸಿ. ಕಾರ್ಯಕ್ರಮ ನಿರೂಪಿಸಿದರು.

