ಉಳ್ಳಾಲ: ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವಾದರೂ ಬಲಿದಾನಕ್ಕೆ ಇರುವ ಕೆಲವು ನಿಬಂದನೆಗಳನ್ನು ಪಾಲಿಸಬೇಕಾಗಿದೆ. ಆಡು, ಕುರಿಗಳನ್ನು ಬಲಿಕೊಟ್ಟರೆ ಕಾರ್ಯ ಪೂರ್ತಿಯಾಗದು. ಬಲಿ ಕೊಡುವ ಮೊದಲು ಅದರ ವರ್ಷ ಮತ್ತು ಅದಕ್ಕಿರುವ ಎಡರುತೊಡರುಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಅವರು ಎಸ್‍ವೈಎಸ್ ಮಂಜನಾಡಿ ಸೆಂಟರ್ ವತಿಯಿಂದ ತೌಡುಗೋಳಿ ಕ್ರಾಸ್ ಬಳಿ ಇರುವ ಜೀಲಾನಿ ಹಾಲ್‍ನಲ್ಲಿ ಇದರ ಆಶ್ರಯದಲ್ಲಿ ಪೊಸೋಟ್ ತಂಙಳ್ ಅನುಸ್ಮರಣೆ ಪ್ರಯುಕ್ತ ಜರಗಿದ ಈದ್ ಹಬ್ಬದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವಂಚಿಸಿ, ಕದ್ದುಮುಚ್ಚಿ ಪ್ರಾಣಿಗಳನ್ನು ತಂದು ಬಲಿದಾನ ನೀಡಿದರೆ ಅದು ಬಲಿದಾನವಾಗದು. ಬಲಿದಾನ ಆಗುವ ಬದಲು ಪಾಪ ಕಟ್ಟಿಕೊಳ್ಳುವ ಕಾರ್ಯವಾಗಬಹುದು. ಇಸ್ಲಾಂನ ಸಿದ್ಧಾಂತ ಪ್ರಕಾರ ನೇರ ನಡೆ ನುಡಿಗಳ ಮೂಲಕ ಧಾರ್ಮಿಕ ವಿದಿವಿದಾನಗಳನ್ನು ಅನುಸರಿಸಿಕೊಂಡು ಬಲಿ ನೀಡಬೇಕು ಎನ್ನುವುದು ನಿಯಮ. ಇದನ್ನು ಎಲ್ಲರೂ ಅನುಕರಣೆ ಮಾಡಬೇಕೆಂದು ಕರೆ ನೀಡಿದರು.
ಎಸ್‍ವೈಎಸ್ ಜಿಲ್ಲಾ ಸದಸ್ಯ ಸಿದ್ದೀಕ್ ಸಖಾಫಿಮೂಳೂರು ತರಗತಿ ನೆರವೇರಿಸಿದರು. ಎಸ್‍ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಕುಂಞಬಾವ್, ಗೌರವಾಧ್ಯಕ್ಷ ಎನ್ ಎಸ್ ಹಮೀದ್ ಹಾಜಿ, ಕಾರ್ಯದರ್ಶಿ ರಝಾಕ್ ಮದನಿ, ತೋಟಾಲ್ ಸಅದಿ ಮೊದಲಾದವರು ಉಪಸ್ಥಿತರಿದ್ದರು.
