ಬಂಟ್ವಾಳ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಬಸ್ ಗಳ ಸಂಘ ಭಾರತ್ ಬಂದ್ ಗೆ ಬೆಂಬಲ ನೀಡಿದ್ದರಿಂದ ಶುಕ್ರವಾರ ಬೆಳಗ್ಗೆಯಿಂದ ಯಾವುದೇ ಖಾಸಗಿ ಬಸ್ ಗಳು ರಸ್ತೆಗಿಳಿಯಲಿಲ್ಲ. ಆದರೆ, ಆಟೊ ರಿಕ್ಷಾಗಳು,ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತಿದೆ.
ತಾಲೂಕಿನ ಪ್ರಮುಖ ವ್ಯವಹಾರ ಕೇಂದ್ರಗಳಾಗಿರುವ ಬಿ.ಸಿ.ರೋಡ್, ಫರಂಗಿಪೇಟೆ, ಬಂಟ್ವಾಳ ಪೇಟೆ, ಮೆಲ್ಕಾರ್ ಹಾಗೂ ಕಲ್ಲಡ್ಕದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದೆ. ಬ್ಯಾಂಕ್ ಗಳು, ಸರಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತಿದೆಯಾದರೂ ಸಾರ್ವಜನಿಕರ ಸಂಖ್ಯೆ ಕಡಿಮೆ ಇದೆ.
ತಾಲೂಕಿನ ಖಾಸಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವು ಸರಕಾರಿ ಶಾಲೆ ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳಿಲ್ಲದೆ ಪಾಠ ಪ್ರವಚನ ನಡೆಯಲಿಲ್ಲ.
ವಿಟ್ಲ ಪೇಟೆಯಲ್ಲಿ ಔಷಧಿ, ಹಾಲು ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳ ಮಾಲಕರು ತಮ್ಮ ಅಂಗಡಿಗಳ ಬಾಗಿಲು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು.
ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ಪೇಟೆಯ ಹ್ರದಯ ಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಬಂಟ್ವಾಳ ಉಪ ವಿಭಾಗದ ಡಿ.ವೈ.ಎಸ್.ಪಿ. ರವೀಶ್ ಸಿ.ಆರ್., ಬಂಟ್ವಾಳ ವ್ರತ್ತ ನಿರೀಕ್ಷಕ ಮಂಜಯ್ಯ, ಬಂಟ್ವಾಳ ನಗರ ಠಾಣೆಯ ಎಸ್ಸೈ ನಂದಕುಮಾರ್, ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಗೌಡ, ವಿಟ್ಲ ಠಾಣೆ ಎಸ್ಸೈ ಪ್ರಕಾಶ್ ದೇವಾಡಿಗರ ನೇತ್ರತ್ವದಲ್ಲಿ ಅವರ ಸಿಬ್ಬಂದಿಗಳು ಭದ್ರತೆಯಲ್ಲಿ ತೊಡಗಿದ್ದಾರೆ.

