ಬಂಟ್ವಾಳ: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ವಿರೋಧಿಸಿ, ತಕ್ಷಣ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ತಾಲೂಕಿನ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರು ಹಾಗೂ ಪೋಷಕರು ಶನಿವಾರ ಶಾಲೆಗೆ ಬೀಗ ಹಾಕಿ ದಿಢೀರ್ ಪ್ರತಿಭಟನೆ ಮಾಡಿದರು. ಶಿಕ್ಷಣ ಸಚಿವರ ವಿರುದ್ದ ಧಿಕ್ಕಾರ ಕೂಗಿ, ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ಹೊರಕಳುಹಿಸಿ ಶಾಲಾ ಕಚೇರಿಗೂ ಬೀಗ ಜಡಿದರು. ಶಿಕ್ಷಕರ ವರ್ಗಾವಣೆ ಆದೇಶವನ್ನು ಹಿಂಪಡೆಯಲು ಶಿಕ್ಷಣ ಇಲಾಖೆಗೆ ಎರಡು ದಿನಗಳ ಕಾಲವಕಾಶ ನೀಡಿರುವ ಅವರು ತಪ್ಪಿದ್ದಲ್ಲಿ ಮಂಗಳವಾರ ಹಳೇ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಾಲಾಭಿವೃದ್ದಿ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.o (3) (1)

o (1)

o (2) (1)

ಕಲ್ಲಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 123 ವರ್ಷಗಳ ಸುದೀರ್ಘ ಇತಿಹಾಸವಿದೆ. ಇಬ್ಬರು ಶಾಸಕರು, ಜಿಲ್ಲಾಧಿಕಾರಿ ಸಹಿತ ಸಮಾಜದ ಉನ್ನತ ಹುದ್ದೆಗಳಲ್ಲಿರುವವರು ಕಲಿತ ಶಾಲೆ ಎನ್ನುವ ಹೆಗ್ಗಳಿಕೆಯೂ ಇಲ್ಲಿಗಿದೆ. ಶಾಲಾ ಸುತ್ತಮುತ್ತಲೂ ಖಾಸಗಿ ಶಾಲೆಗಳು ಇದ್ದರೂ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲಿ 213 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕರ ನಿರಂತರ ಪ್ರಯತ್ನದಿಂದಾಗಿ ಒಂದನೆ ತರಗತಿಗೆ 23 ವಿದ್ಯಾರ್ಥಿಗಳು ಸಹಿತ ಒಟ್ಟು 60 ಮಂದಿ ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ. ಇದೀಗ ಈ ಶಾಲೆಯಲ್ಲಿ ಇದ್ದ 10 ಮಂದಿ ಶಿಕ್ಷಕರ ಪೈಕಿ ಇಬ್ಬರಿಗೆ ವರ್ಗಾವಣೆ ಆದೇಶ ಬಂದಿರುವುದು ಶಾಲಾಭಿವೃದ್ದಿ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಕಂಗೆಡಿಸಿದೆ. ಉಳಿದ ಎಂಟು ಮಂದಿ ಶಿಕ್ಷಕರಲ್ಲಿ ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕಿಯರನ್ನು ಹೊರತು ಪಡಿಸಿದರೆ ಆರು ಮಂದಿ ಶಿಕ್ಷಕರು ಕರ್ತವ್ಯದಲ್ಲಿರುತ್ತಾರೆ. ಅದರಲ್ಲೂ ಒರ್ವರು ಈ ಹಿಂದೆ ಬಾಲವಾಡಿ ಇದ್ದಾಗಿನ ಶಾಲಾ ಮಾತೆ. ಶಿಕ್ಷಣ ಇಲಾಖೆಯ ಅನುಪಾತ ಲೆಕ್ಕಾಚಾರದಲ್ಲೂ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಶಿಕ್ಷಕರು ಲಭ್ಯವಿಲ್ಲದೇ ಇರುವುದರಿಂದ ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಬಾಲಕಾರ್ಮಿಕರಾಗಲು ಪ್ರೇರಣೆ:
ಒಂದೆಡೆ ದಕ್ಷಿಣ ಕನ್ನಡವನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಸಿದ್ದತೆ ನಡೆಯುತ್ತಿದೆ. ಇನ್ನೊಂದೆಡೆ ಸರ್ಕಾರಿ ಶಾಲೆಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿ ಶಾಲೆಯನ್ನು ಮುಚ್ಚುವ ತಂತ್ರವನ್ನು ಸರ್ಕಾರ ಮಾಡುತ್ತಿದೆ. ಸರಿಯಾಗಿ ಶಿಕ್ಷಕರಿಲ್ಲದೆ ಶಾಲೆಗಳು ಮುಚ್ಚಿ ಹೋದರೆ ನಮ್ಮಂತಹ ಬಡವರಿಗೆ ಸಾವಿರಾರು ರುಪಾಯಿ ದೇಣಿಗೆ ನೀಡಿ ಖಾಸಗಿ ಶಾಲೆಗೆ ಕಳುಹಿಸಲು ಸಾದ್ಯವಿಲ್ಲ. ಮಕ್ಕಳನ್ನು ಬಾಲಕಾರ್ಮಿಕರನ್ನು ಮಾಡದೇ ಬೇರೆ ವಿಧಿಯಿಲ್ಲ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಶಾಲೆ ಮುಚ್ಚುವ ಪರಿಸ್ಥಿತಿ ಬಂದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೊಂದು ನ್ಯಾಯ ಹಾರಾಡಿ ಶಾಲೆಗೊಂದು ನ್ಯಾಯ
ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಯ ಮನವಿಗೆ ಸ್ಪಂದಿಸಿ ಶಿಕ್ಷಕರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಆದರೆ ಅಂತಹುದೇ ಸ್ಥಿತಿಯಲ್ಲಿ ಜಿಲ್ಲೆಯ ಅನೇಕ ಶಾಲೆಗಳಿವೆ. ನಾವಿಗಾಗಲೇ ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ ಹಾರಾಡಿ ಶಾಲೆಗೊಂದು ನ್ಯಾಯ ನಮಗೊಂದು ನ್ಯಾಯವೇ? ಇಂತಹ ತಾರತಮ್ಯ ಸರಿಯಲ್ಲ ಎಂದು ಪ್ರತಿಭಟನಕಾರರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಕರ ವರ್ಗಾಯಣೆಯನ್ನು ವಿರೊಧಿಸಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಮಂಗಳವಾರದೊಳಗಾಗಿ ನಮ್ಮ ಮನವಿಗೆ ಸಕರಾತ್ಮಕ ಸೊಮದನೆ ನೀಡದಿದ್ದರೆ ಪ್ರತಿಭಟನೆ ಮೂದುವರಿಸಿ ನ್ಯಾಯ ಸಿಗುವವರೆಗೂ ಶಾಲೆ ಬಂದ್ ಮಾಡುತ್ತೇವೆ ಎಂದು ಪ್ರತಿಭಟನಕಾರರು ತಿಳಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಆರ್‍ಪಿ ಅವರ ಮುಖಾಂತರ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಬಂಟ್ವಾಳ ನಗರ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ಶತಮಾನಗಳಷ್ಟು ಹಳೆಯಾದಾದ ಈ ಶಾಲೆಯಲ್ಲಿ ಶಾಲಾಭಿವೃದ್ದಿ ಮಂಡಳಿ ಹಾಗೂ ಶಿಕ್ಷಕರ ಪ್ರಯತ್ನದಿಂದ ಈ ವರ್ಷ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ಶಾಲೆಯ ಇಬ್ಬರು ಕ್ರಿಯಾಶೀಲ ಶಿಕ್ಷಕರನ್ನು ವರ್ಗಾವಣೆ ಮಾಡಲು ಇಲಾಖೆಯ ಆದೇಶ ಬಂದಿದೆ. ಹಂತಹಂತವಾಗಿ ಶಿಕ್ಷಕರನ್ನು ವರ್ಗಾವಣೆ ಮಾಡಿ ಶಾಲೆಯ ಬಂದ್ ಮಾಡುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಅದರ ಬದಲಿಗೆ ನಾವೇ ಬೀಗ ಹಾಕಿ ಬಂದ್ ಮಾಡಿದ್ದೇವೆ. ಶಿಕ್ಷಕರ ವರ್ಗಾವಣೆ ಆದೇಶ ಹಿಂಪಡೆಯುವರೆಗೆ ಶಾಲೆಯ ಬೀಗ ತೆರೆಯಲು ಬಿಡುವುದಿಲ್ಲ- ರಾಜೇಶ್ ಕೊಟ್ಟಾರಿ, ಅಧ್ಯಕ್ಷರು ಶಾಲಾಭಿವೃದಿ ಮಂಡಳಿ ಸ.ಮಾ.ಹಿ.ಪ್ರಾ.ಶಾಲೆ ಕಲ್ಲಡ್ಕ.

By Suddi9

Leave a Reply

Your email address will not be published. Required fields are marked *