ಬಂಟ್ವಾಳ: ವ್ಯಕ್ತಿಯು ತನ್ನ ಬಗ್ಗೆ ಕಡಿಮೆ ಯೋಚನೆ ಮಾಡಿ ಇತರರ ಬಗ್ಗೆ ಹೆಚ್ಚು ಯೋಚನೆ ಮಾಡುವುದೇ ಆಧ್ಯಾತ್ಮ. ಆಧ್ಯಾತ್ಮಿಕ ಚಿಂತನೆ ಬೆಳೆದು ತಾಯಿ ಭಾರತಿಯ ಕಾರ್ಯದಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು, ಹೃದಯದ ದೀಪ ಬೆಳಗಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಅವರು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2016-17ನೇ ಸಾಲಿನ ಹೊಸ ವಿದ್ಯಾಥಿಗಳ ಪ್ರವೇಶೋತ್ಸವ ಆಗತ-ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದಲ್ಲಿ ವಿವಿಧ ಭಾಷೆ ಕಲಿಯುವ ಸಾಮಥ್ರ್ಯ ಭಾರತೀಯರಿಗಿದೆ. ಕೆಲಸಕ್ಕಾಗಿ ಬೇರೆ ದೇಶವನ್ನು ಅವಲಂಬಿಸುವ ಅಗತ್ಯವಿಲ್ಲ ಎಂದರು.

ಅತಿಥಿಗಳಾಗಿ ಶ್ರೀ ರಾಮಕೃಷ್ಣ ಮಠ ಮಂಗಳೂರಿನ ಶ್ರೀ ಸ್ವಾಮಿ ಧರ್ಮವ್ರತಾನಂದ ಜೀ ಮಾತನಾಡಿ ವಿದ್ಯಾರ್ಥಿ ಜೀವನ ಸಮಯವು ಬಹಳ ಮುಖ್ಯವಾಗಿದ್ದು ಈ ಹಂತದಲ್ಲಿ ನಿಯಮಗಳನ್ನು ಪಾಲಿಸಿ ಕಷ್ಟಗಳನ್ನು ಅನುಭವಿಸಿದಲ್ಲಿ ಅಂತಹ ಬದುಕಿನ ಅನುಭವಗಳು ಮುಂದಿನ ಜೀವನಕ್ಕೆ ದಾರಿಯಾಗುತ್ತದೆ. ಶ್ರಮವಹಿಸಿ ಅಡಿಪಾಯ ಗಟ್ಟಿಮಾಡಿದರೆ ಸುಭದ್ರ ಹಾಗೂ ಬಲಶಾಲಿಯಾಗಬಹುದು ಧರ್ಮವಿರುವುದು ಸಿದ್ಧಾಂತದಲ್ಲಲ್ಲ, ಅದರ ಅನುಷ್ಠಾನದಲ್ಲಿ ಒಳ್ಳೆಯವನಾಗಿರುವುದು, ಒಳ್ಳೆಯದನ್ನು ಮಾಡುವುದೇ ಧರ್ಮ. ಮಾಡುವ ಕೆಲಸದಲ್ಲಿ ಗಮನವಿದ್ದಲ್ಲಿ ಆ ಕೆಲಸವು ವ್ಯಕ್ತಿತ್ವಕ್ಕೆ ಪೂರಕವಾಗುತ್ತದೆ. ಉನ್ನತ ಮಟ್ಟಕ್ಕೆ ದಾರಿಯಾಗುತ್ತದೆ. ನಮ್ಮ ತಪ್ಪುಗಳು ನಮ್ಮನ್ನು ಚುಚ್ಚುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ ವಹಿಸಿದ್ದರು. ಅತಿಥಿಗಳಾಗಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವರಾಮ ಪೈಲೂರು ಪ್ರಥಮ ವರ್ಷದ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನಕ್ಕೆ ಶುಭಹಾರೈಸಿದರು, ಎಂ.ಕೆ. ಶ್ರೀನಿವಾಸ್ ನಾಯಕ್ ಉದ್ಯಮಿಗಳು ಕಿಯಾನ್ ಇಂಪೆಕ್ಸ್, ಹೋಟೇಲ್ ವೃಶಾಲಿ ಪ್ರೈ.ಲಿ. ಕೋಲ್ಹಾಪುರ ಇದರ ನಿರ್ದೇಶಕರಾದ ಮಾನಸಿ ಎಸ್ ನಾಯಕ್, ವಕೀಲರು ಹಾಗೂ ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಮಾಲತಿ ಹಾಗೂ ಶಾಮಣ್ಣ ದಂಪತಿಗಳು ಕಳಸ, ಅಧೋಕ್ಷಜ ಭಟ್ ಮಾಣಿಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕಿ ಶೈಲಜಾ ವಂದಿಸಿದರು. ವಿದ್ಯಾರ್ಥಿ ತೀರ್ಥೇಶ್ ಕಾರ್ಯಕ್ರಮ ನಿರೂಪಿಸಿದರು.


