ಬಂಟ್ವಾಳ:ಕಳೆದ 1966ರಲ್ಲಿ ಕೆಲವೊಂದು ಸಾಹಿತ್ಯಾಸಕ್ತರು ನವದೆಹಲಿಯಲ್ಲಿ ಆರಂಭಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಭಾರತೀಯ ಭಾಷೆಗಳ ದೇಶವ್ಯಾಪಿ ಸಾಹಿತ್ಯಕ ಸಂಸ್ಥೆಯು ಬಂಟ್ವಾಳ ತಾಲ್ಲೂಕಿನಲ್ಲಿಯೂ ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ ಘಟಕವೊಂದನ್ನು ಆರಂಭಿಸಿದೆ ಎಂದು ತಾಲ್ಲೂಕು ಘಟಕದ ಸಂಚಾಲಕ, ವಕೀಲ ರಾಜಾರಾಮ ನಾಯಕ್ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ವಿವಿಧ ಭಾಷೆಗಳ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರನ್ನು ಸಂಪರ್ಕ ಸೇತುವೆ ಮಾದರಿಯಲ್ಲಿ ಒಟ್ಟುಗೂಡಿಸಿ, ಸಾಹಿತ್ಯಕ್ಕೆ ಸಂಬಂಧಿಸಿದ ವಿಭಿನ್ನ ವಿಚಾರಗಳನ್ನು ಪರಸ್ಪರ ವಿಮರ್ಶೆ ನಡೆಸುವುದರ ಜೊತೆಗೆ ಭಾರತೀಯ ಸಾಹಿತ್ಯ ಸಂವರ್ಧನೆಗೊಳಿಸುವುದು ಈ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆದಿ ಕವಿ ಪಂಪನಿಂದ ಹಿಡಿದು ರಾಷ್ಟ್ರಕವಿ ಕುವೆಂಪುತನಕ ಸಾಹಿತ್ಯವಾಹಿನಿ ಸಮೃದ್ಧವಾಗಿ ಹರಿದು ಬಂದಿದೆ. ಈಗಾಗಲೇ ಒಟ್ಟು 22 ರಾಜ್ಯಗಳಲ್ಲಿ ಸುಮಾರು 114 ಕ್ರಿಯಾಶೀಲ ಘಟಕಗಳನ್ನು ಹೊಂದಿರುವ ಪರಿಷತ್ ಮುಂದಿನ ಪೀಳಿಗೆಗೆ ಪಂಪ, ಕುಮಾರವ್ಯಾಸ ಇವರಂತಹ ಮಹಾನ್ ಕವಿಗಳ ಬಗ್ಗೆ ಪರಿಚಯಿಸುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಾಹಿತ್ಯ ಕಂಪನ್ನು ಪಸರಿಸುವುದು ಹಾಗೂ ಪ್ರತೀ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರನ್ನು ಸಂಘಟಿಸಲು ಅಖಿಲ ಸಾಹಿತ್ಯ ಪರಿಷತ್ ಮುಂದಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಸಾಹಿತಿ ವಿ.ಸು.ಭಟ್, ಸಲಹೆಗಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಹ ಕಾರ್ಯದರ್ಶಿ ವಕೀಲ ರವೀಂದ್ರ ಕುಕ್ಕಾಜೆ ಮತ್ತಿತರರು ಇದ್ದರು.
