ಕೈಕಂಬ: ಚಾಲಕ ತನ್ನ ಲಾರಿಗೆ ಒಮ್ಮೆಲೆ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಘಟನೆ ಗುರುಪುರ ಕೈಕಂಬದ ಜಂಕ್ಷನ್ ಬಳಿ ಶುಕ್ರವಾರ ಬೆಳಗ್ಗೆ 6 ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ ಸಣ್ಣಪುಟ್ಟ ಗಾಯಗೊಂಡ ಬಸ್ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಮೂಡಬಿದ್ರೆಗೆ ತೆರಳುವ ಖಾಸಾಗಿ ಬಸ್ ಕೈಕಂಬ ಜಂಕ್ಷನ್ ಬಳಿ ಸಂಚರಿಸುತ್ತಿದ್ದಂತೆ ಮುಂದಿನಿಂದ ಸಂಚರಿಸುತ್ತಿದ್ದ ಲಾರಿಯ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂದಿನ ಬಸ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.


ಡಿಕ್ಕಿಯ ರಭಸಕ್ಕೆ ಬಸ್ಸು ಸಂಫೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ ಚಾಲಕನಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಡಿಕ್ಕಿಯ ರಭಸಕ್ಕೆ ಲಾರಿ ಬಲಭಾಗಕ್ಕೆ ತಿರುಗಿ ಡಿವೈಡರ್ ದಾಟಿ ನಿಂತಿತ್ತು. ಡಿಕ್ಕಿಯ ರಭಸಕ್ಕೆ ಬಸ್ ಕೊಂಚ ಮುಂದೆ ಹೋಗುತ್ತಿದ್ದರೂ ಅಲ್ಲೇ ಸಮೀಪದ ಮನೆಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಅಲ್ಲದೆ ಮುಂಜಾನೆ ಪಾದಾಚಾರಿಗಳಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ. ಬಜ್ಪೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

