ಬಂಟ್ವಾಳ:ತಾಲ್ಲೂಕಿನ ಒಟ್ಟು ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಕಿ ಪ್ರಥಮ ಬಾರಿಗೆ ಕಾಮಗಾರಿ ಆರಂಭಗೊಂಡ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಏಪ್ರಿಲ್ ತಿಂಗಳಿನಿಂದಲೇ ನೀರು ಬರಿದಾಗಿ ಮಳು ಮಾತ್ರ ಕಾಣುತ್ತಿದೆ.
ತಾಲ್ಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪುಚ್ಚಮೊಗರು ಫಲ್ಗುಣಿ ಹೊಳೆ ಮತ್ತು ಕೊಳ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕರೋಪಾಡಿಗೆ ನೇತ್ರಾವತಿ ನದಿ ನೀರು ಮೇಲೆತ್ತಿ ಶುದ್ಧೀಕರಿಸಿದ ಬಳಿಕ ಅಲ್ಲಿನ ಪ್ರತೀ ಗ್ರಾಮಗಳಿಗೂ ನಿರಂತರ ಕುಡಿಯುವ ನೀರು ಪೂರೈಸುವುದು ಸರ್ಕಾರದ ಮುಖ್ಯ ಉದ್ದೇಶ.

1btl-Puchamogaru
ಕಳೆದ ಆರೇಳು ತಿಂಗಳಿನಿಂದ ಎರಡೂ ಕಡೆಯಲ್ಲಿಯೂ ಜಾಕ್‍ವೆಲ್ ಅಳವಡಿಕೆ ಸಹಿತ ಶುದ್ಧೀಕರಣ ಘಟಕ ನಿರ್ಮಾಣ, ಪೈಪ್‍ಲೈನ್ ಮತ್ತು ಟ್ಯಾಂಕ್ ನಿರ್ಮಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ.
ಇಲ್ಲಿನ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಕೂಡಾ ಎಂದಿಗೂ ನೀರು ಕಡಿಮೆಯಾಗದಂತೆ ಹೊಳೆ ಮಧ್ಯೆ ಹೊಂಡ ಕೊರೆದು ಜಾಕ್‍ವೆಲ್ ಅಳವಡಿಸಲಾಗುತ್ತಿದೆ. ಇನ್ನೊಂದೆಡೆ ಹೊಳೆ ಮೇಲ್ಭಾಗದಲ್ಲಿರುವ ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ಮೂರು ಪ್ರತ್ಯೇಕ ಟ್ಯಾಂಕ್ ಮಾದರಿಯಲ್ಲಿ ಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಮಂಗಳೂರಿನ ಮೊಗರೋಡಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಸಂಗಬೆಟ್ಟು, ಅಣ್ಣಳಿಕೆ, ಪಂಜಿಕಲ್ಲು ಮತ್ತಿತರ ಕಡೆಗಳಲ್ಲಿ ಬೃಹತ್ ಗಾತ್ರದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಿದೆ. ಈ ನಡುವೆ ಬಂಟ್ವಾಳ-ಮೂಡುಬಿದ್ರೆ ರಸ್ತೆ ಬದಿ ಪೈಪ್‍ಲೈನ್ ಅಳವಡಿಸುವ ಕಾಮಗಾರಿಯೂ ಪ್ರಗತಿಯಲ್ಲಿದೆ.
ರೂ 36ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಇಲ್ಲಿನ ಸಂಗಬೆಟ್ಟು ಮಾತ್ರವಲ್ಲದೆ, ಚೆನ್ನೈತ್ತೋಡಿ, ಕುಕ್ಕಿಪಾಡಿ, ರಾಯಿ, ಪಂಜಿಕಲ್ಲು, ಅರಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಬಗ್ಗೆ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಈ ನಡುವೆ ಫಲ್ಗುಣಿ ಹೊಳೆಯಲ್ಲಿ ಪ್ರತೀ ವರ್ಷದಂತೆ ಏಪ್ರಿಲ್ ತಿಂಗಳಿನಿಂದಲೇ ನೀರು ಬರಿದಾಗಿ ಮಳು ಮಾತ್ರ ಕಾಣುತ್ತಿದೆ. ಈ ಹೊಳೆಯಲ್ಲಿ ಒಂದೆಡೆ ಜ್ಯಾಕ್‍ವೆಲ್ ನಿಮಾಣ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಭಾರೀ ಪ್ರಮಾಣದಲ್ಲಿ ಮರಳು ತೆಗೆದು ಸಾಗಾಟ ಮಾಡುವ ಪ್ರಕ್ರಿಯೆ ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈಗಾಗಲೇ ಮೂಡುಬಿದ್ರೆ ಪುರಸಭೆಗೆ ಕಳೆದ ಹಲವು ವರ್ಷಗಳಿಂದಲೂ ಕುಡಿಯುವ ನೀರು ಪೂರೈಸುತ್ತಿದ್ದು, ಪ್ರತೀ ವರ್ಷ (ಏಪ್ರಿಲ್ ಮತ್ತು ಮೇ ) ಎರಡು ತಿಂಗಳು ಬರಿದಾಗುವ ಈ ಹೊಳೆಯಿಂದ 16 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಹೇಗೆ ಸಾಧ್ಯ…? ಎಂಬ ಪ್ರಶ್ನೆಯೂ ಇಲ್ಲಿನ ಜನರನ್ನು ಕಾಡತೊಡಗಿದೆ.

By suddi9

Leave a Reply

Your email address will not be published. Required fields are marked *