ಕಲ್ಲಡ್ಕ: ಕಳೆದ ಅವಧಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದಂತೆ ಯಾವುದೇ ಜಾತಿ-ಧರ್ಮವನ್ನೂ ಲೆಕ್ಕಿಸದೆ ‘ಭಾಗ್ಯಲಕ್ಷ್ಮಿ’, ಸಂಧ್ಯಾ ಸುರಕ್ಷೆಯಂತಹ ಮಹತ್ತರ ಯೋಜನೆ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಭೀಕರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ರಾವಣ ರಾಜ್ಯಕ್ಕೆ ಬದಲಾಗಿ ರಾಮರಾಜ್ಯ ಮರುಸ್ಥಾಪನೆ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು ಹೀಗೆ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಆಚರಿಸಿ ಜಗತ್ತಿನಲ್ಲೇ ಗೌರವ ತಂದಿದ್ದಾರೆ. ಅಂಬೇಡ್ಕರ್ ಅವರ ಅಂತ್ಯಕ್ರಿಯೆಯನ್ನೂ ದೆಹಲಿಯಲ್ಲಿ ನಡೆಸಲು ಅವಕಾಶ ನೀಡದೆ ಮುಂಬೈನಲ್ಲಿ ನಡೆಸುವಂತೆ ಮಾಡಿದ ಕಾಂಗ್ರೆಸ್ಸಿಗರು ನೈತಿಕತೆ ಪಾಠ ಹೇಳುತ್ತಾರೆ ಎಂದು ಅವರು ಟೀಕಿಸಿದರು. ವಿದೇಶ ಮಾದರಿಯಲ್ಲಿ ದೇಶದಲ್ಲಿ ಕೂಡಾ ಜಾತಿ ಸಂಕೋಲೆ ತೊರೆದಾಗ ಮಾತ್ರ ತ್ವರಿತ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಕಲ್ಲಡ್ಕದಲ್ಲಿ ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರಿಂದ ಶ್ರೀರಾಮ ಮಂದಿರ ಲೋಕಾರ್ಪಣೆಗೊಳಿಸುವ ಮೂಲಕ ಡಾ.ಕೆ.ಪ್ರಭಾಕರ ಭಟ್ಟರು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಎಂದರು. ನಾನು ತಪ್ಪು ಹಾದಿಯಲ್ಲಿ ನಡೆದಾಗ ತಿದ್ದಿ, ಸರಿ ದಾರಿಯಲ್ಲಿ ನಡೆದಾಗ ಬೆನ್ನು ತಟ್ಟುವ ಮೂಲಕ ಭಟ್ಟರು ಜಿಲ್ಲೆಯಲ್ಲಿ ಕೇವಲ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದಾರೆ.
ಅಯೋಧ್ಯೆಯಲ್ಲಿ ಕೂಡಾ ಶ್ರೀರಾಮ ಮಂದಿರ ಎಲ್ಲರ ಸಹಕಾರದಲ್ಲಿ ಶೀಘ್ರವೇ ಲೋಕಾರ್ಪಣೆಯಾಗಲಿದೆ ಎಂದು ಅವರು ತಿಳಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಮುಂಬೈ ಉದ್ಯಮಿ ಉಮೇಶ ಶೆಟ್ಟಿ, ಬಂಟರ ಮಾತೃಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ಶುಭ ಹಾರೈಸಿದರು.
ಉದ್ಯಮಿ ಮಂಗೇಶ ಪಾಂಡೆ, ದೇವಾನಂದ ಶೆಟ್ಟಿ ಡಿಕ್ಸ್, ಪುಷ್ಪರಾಜ್ ಜೈನ್, ಸುರೇಶ ಶೆಟ್ಟಿ ಗುರ್ಮೆರ್ , ಕಟ್ಟಡ ವಿನ್ಯಾಸಕಾರ ಧರ್ಮರಾಜ್, ಕಾರ್ಯಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಮತ್ತಿತರರು ಇದ್ದರು.
ಇದೇ ವೇಳೆ ಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ವಂದಿಸಿದರು. ಬಿ.ದೇವದಾಸ ಶೆಟ್ಟಿ ಮತ್ತು ರಾಜೇಶ ಕೊಟ್ಟಾರಿ ನಿರೂಪಿಸಿದರು.


