ಯಾತ್ರಿ ನಿವಾಸ ನಿರ್ಮಾಣಕ್ಕೆ ಯತ್ನ: ಸಚಿವ ರೈ ಭರವಸೆ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಜಿಲಮೊಗರು ಹಝ್ರತ್ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಮಂಜೂರಾತಿ ದೊರೆಯಲಿದೆ ಎಂದು ಜಿಲಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬುಧವಾರ ರಾತ್ರಿ ಇಲ್ಲಿ ನಡೆದ 743ನೇ ಮಾಲಿದಾ ಉರೂಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಲ್ಲಿನ ಅಜಿಲಮೊಗರು ಮಸೀದಿ ಮತ್ತು ಕಡೇಶ್ವಾಲ್ಯ ಲಕ್ಷ್ಮೀನರಸಿಂಹ ದೇವಸ್ಥಾನ ಸಂಪರ್ಕಿಸಲು ನೇತ್ರಾವತಿ ನದಿಗೆ ಅಡ್ಡವಾಗಿ ಬೃಹತ್ ವೆಚ್ಚದ ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಸ್.ಎಂ. ರಶೀದ್ ಮಾತನಾಡಿ, ಅಜಿಲಮೊಗರು ಪ್ರದೇಶವು ಶಾಂತಿ ಮತ್ತು ಸೌಹಾರ್ದತೆ ತಾಣವಾಗಿದೆ ಎಂದರು.
ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಮಾಣಿ ಕೃಷಿ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಸಂಜೀವ ಪೂಜಾರಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ, ನಾರಾಯಣ ಪೂಜಾರಿ, ಪ್ರಮುಖರಾದ ಆದಂ ಕುಂಞ, ಮುಹಮ್ಮದ್ ಕುಂಞ, ಆದಂ, ಕೆ.ಪಿ. ಖಾದರ್, ಇಖ್ರಾ ಖಾದರ್, ಚೆರಿಯ ಮೋನು, ಅದ್ದು ಬಾಜಾರು ಮತ್ತಿತರರು ಇದ್ದರು.
