ಮೂಡುಬಿದಿರೆ: ಹೋಬಳಿಯ ಎರಡೂ ಜಿ.ಪಂ ಕ್ಷೇತ್ರ ಹಾಗೂ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪ್ರಬಲ ಪಕ್ಷವಾಗಿ ಮೂಡಿಬಂದಿದೆ. ಕಾಂಗ್ರೆಸ್ ಮೂರು ತಾ.ಪಂ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಮುಖಭಂಗ ಅನುಭವಿಸಿದೆ.
ಜಿ.ಪಂ.ಗಳಲ್ಲಿ ಅರಳಿದ ಕಮಲ:
ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಯ ಸುಚರಿತ ಶೆಟ್ಟಿ ಹಾಗೂ ಶಿರ್ತಾಡಿ ತಾ.ಪಂ ಕ್ಷೇತ್ರದಲ್ಲಿ ಬಿಜೆಪಿಯ ಸುಜಾತ ಕೆ.ಪಿ ಗೆಲುವು ಸಾಧಿಸಿದ್ದಾರೆ. ಪುತ್ತಿಗೆ ಕ್ಷೇತ್ರದಲ್ಲಿ ಬಿಜೆಪಿಗೆ ಎರಡನೇ ಗೆಲವು ಹಾಗೂ ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಚೊಚ್ಚಲ ಗೆಲುವು. ಪುತ್ತಿಗೆಯಲ್ಲಿ ಚಂದ್ರಹಾಸ(ಕಾಂಗ್ರೆಸ್), ದಿವಾಕರ ಶೆಟ್ಟಿ(ಜೆಡಿಎಸ್) ಹಾಗೂ ಯಾದವ ಶೆಟ್ಟಿ(ಸಿಪಿಐಎಂ) ಸೋಲನ್ನು ಅನುಭವಿಸಿದ್ದಾರೆ.ಸುಚರಿತ ಶೆಟ್ಟಿ 92 ಮತಗಳ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಬಿಜೆಪಿಯ ಸುಜಾತ ಕೆ.ಪಿ ಎದುರಲ್ಲಿ ಸುಮಿತ್ರಾ ಪಾಂಡ್ರು(ಕಾಂಗ್ರೆಸ್), ಮೋಹಿನಿ( ಸಿಪಿಐಎಂ) ಸೋಲು ಅನುಭವಿಸಿದ್ದಾರೆ. 1643 ಮತಗಳ ಭಾರಿ ಅಂತರದಲ್ಲಿ ಸುಜಾತ ಅವರಿಗೆ ಗೆಲುವಾಗಿದೆ.
ತಾ.ಪಂ.ನಲ್ಲೂ ಬಿಜೆಪಿ ಪ್ರಬಲ:
ಹೋಬಳಿ 7 ತಾ.ಪಂ ಕ್ಷೇತ್ರಗಳಲ್ಲಿ ನಾಲ್ಕು ಕಡೆ ಬಿಜೆಪಿ ಗೆಲುವು ಸಾಧಿಸಿದರೆ, ಕೇವಲ ಮೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯವಾಗಿದೆ.
ತೆಂಕಮಿಜಾರು- ತೆಂಕಮಿಜಾರು ತಾ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಕಾಶ್ ಗೌಡ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ನ ಹರಿಪ್ರಸಾದ್ ಶೆಟ್ಟಿ, ಬಿಜೆಪಿಯ ಉಮಾನಾಥ ದೇವಾಡಿಗ, ಸಿಪಿಐಎಂನ ಲಕ್ಷ್ಮೀ ತೆಂಕಮಿಜಾರಿನಲ್ಲಿ ತಮ್ಮ ಕಾರುಬಾರು ತೋರಿಸುವಲ್ಲಿ ವಿಫಲರಾಗಿದ್ದಾರೆ.
ಹೊಸಬೆಟ್ಟು-ಗ್ರಾ.ಪಂ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ಅಭ್ಯರ್ಥಿ ರೀಟಾ ಕುಟಿನ್ಹಾ ಹೊಸಬೆಟ್ಟು ತಾ.ಪಂ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ. ಇರುವೈಲು ಗ್ರಾ.ಪಂ ಉಪಾಧ್ಯಕ್ಷೆ ಬ್ರಿಜಿತ್ ಕುಟಿನ್ಹಾ ಬಿಜೆಪಿ ಅಭ್ಯರ್ಥಿಯಾಗಿದ್ದು ಸೋಲನ್ನು ಅನುಭವಿಸಿದ್ದಾರೆ.ಜೆಡಿಎಸ್ನ ಪ್ಲಾವಿಯಾ ಮೆಂಡಿಸ್, ಸಿಪಿಐಎಂನ ರಾಧ ಈ ಕ್ಷೇತ್ರದಿಂದ ಜಯಸಾಧಿಸಲು ವಿಫಲರಾದವರು.
ಬೆಳುವಾಯಿ-ತಾ.ಪಂ ಬಿಜೆಪಿ ಅಭ್ಯರ್ಥಿ ಸಂತೋಷ್ ಗೆಲುವು, ಬಿಜೆಪಿ ಸಂತೋಷವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಅಭ್ಯರ್ಥಿ ವಿಜಯ, ಸಿಪಿಐಎಂ ಸುಂದರ ಸೋತ ಅಭ್ಯರ್ಥಿಗಳು.
ಶಿರ್ತಾಡಿ-ಜಿ.ಪಂ ಹಾಗೂ ತಾ.ಪಂ ಎರಡೂ ಕ್ಷೇತ್ರಗಳು ಬಿಜೆಪಿಯ ತೆಕ್ಕೆಗೆ ಸೇರಿದೆ. ಶಿರ್ತಾಡಿ ತಾ.ಪಂ ಕ್ಷೇತ್ರದಿಂದ ನಾಗವೇಣಿ ಗೆಲ್ಲುವುದರ ಮೂಲಕ ಬಿಜೆಪಿಯನ್ನು ವರ್ಚಸ್ಸನ್ನು ಶಿರ್ತಾಡಿಯಲ್ಲಿ ಹೆಚ್ಚಿಸಿದ್ದಾರೆ.
ನೆಲ್ಲಿಕಾರು
ಹೊಸ ತಾ.ಪಂ ಕ್ಷೇತ್ರ ನೆಲ್ಲಿಕಾರಿನಲ್ಲಿ ಬಿಜೆಪಿಯ ರೇಖಾ ಸಾಲ್ಯಾನ್ ಜಯ ಸಾಧಿಸಿದ್ದಾರೆ.ಕಾಂಗ್ರೆಸ್ನ ಪ್ರೇಮಾ ಸೋತಿದ್ದಾರೆ.
ಪಡುಮಾನಾಡು-ತಾ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಯುವನಾಯಕ ಪ್ರಶಾಂತ್ ಈ ಭಾಗದ ತಾ.ಪಂ ಸದಸ್ಯರಾಗಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಕೈಹಿಡಿದ ಸೂರಜ್, ಹೋಬಳಿಯ ಏಕೈಕ ಪಕ್ಷೇತರ ಅಭ್ಯರ್ಥಿ ನೇಮಿರಾಜ್ ಸೋಲನ್ನು ಅನುಭವಿಸಿದ್ದಾರೆ.
ಪಾಲಡ್ಕ- ತಾ.ಪಂ ಕ್ಷೇತ್ರದಲ್ಲಿ ಬಿಜೆಪಿ ವನಿತಾ ನಾಯ್ಕ್ ಗೆಲುವು ಸಾಧಿಸಿದ್ದಾರೆ.ತಾ.ಪಂ ಮಾಜಿ ಅಧ್ಯಕ್ಷೆ ಸವಿತಾ ಟಿ.ಎನ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರೂ ಗೆಲ್ಲಲು ವಿಫಲರಾಗಿದ್ದಾರೆ. ಜೆಡಿಎಸ್ನ ಗಾಯತ್ರಿ, ಸಿಪಿಐಎಂನ ಉಷಾ ಪರಭಾವಗೊಂಡವರು.
