ಬಜ್ಪೆ: ಅತ್ತ ಸೆಝ್ ಸಂತ್ರಸ್ತರ ಕಾಲೊನಿ, ಇತ್ತ ಭರದಿಂದ ನಡೆಯುತ್ತಿರುವ ಸೆಝ್ ಕಾಮಗಾರಿ ಈ ನಡುವೆ ಅಕ್ಷರಶ: ದ್ವೀಪದಂತಾದ ಕೊಂಚಾರು ಎನ್ನುವ ಪುಟ್ಟ ಊರು. ಇಲ್ಲಿ 150 ಮನೆಗಳು ಇದ್ದು, ಸೆಝ್ ವ್ಯಾಪ್ತಿಗೆ ಇನ್ನೂ ಒಳಪಡದಿರುವ ಕಾರಣ ಇಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

bajpe 2

bajpe  1
ಬಜ್ಪೆ ಪಂಚಾಯತ್ ವ್ಯಾಪ್ತಿಯ ಕೊಂಚಾರು ಸೆಝ್ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿನ ಮುಕ್ಕಾಲು ಭಾಗ ಭೂಮಿಯನ್ನು ಸೆಝ್ ಕಬಳಿಸಿದ್ದರೆ, 150 ಮನೆಗಳ ಒಂದು ಭಾಗ ಹಾಗೆಯೇ ಉಳಿದಿದೆ. ಇಲ್ಲಿ ಎತ್ತರದ ಗುಡ್ಡವನ್ನು ನೆಲಸಮ ಮಾಡಲಾಗುತ್ತಿದ್ದು, ಇಲ್ಲಿಯೇ ಸಮೀಪದಲ್ಲಿ ಮಣ್ಣು ತುಂಬಿಸಿ ತಗ್ಗು ಪ್ರದೇಶವನ್ನು ಏರಿಕೆ ಮಾಡಲಾಗುತ್ತಿದೆ. ಇಲ್ಲಿಗೂ-ಜನವಸತಿ ಪ್ರದೇಶಕ್ಕೂ ನಡುವೆ ನೀರು ಹರಿಯಲು ಕಣಿವೆಯಷ್ಟು ಆಳದ ಜಾಗ ಖಾಲಿ ಬಿಡಲಾಗಿದ್ದು, ಮೇಲಿನಿಂದ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಮಣ್ಣು ಇಲ್ಲಿ ಶೇಖರಣೆಯಾಗುತ್ತಿದೆ. ಇಲ್ಲೇ ಪಕ್ಕದಲ್ಲಿ ಜನವಸತಿ ಪ್ರದೇಶವಿದ್ದು, ಪಕ್ಕದಲ್ಲಿ ಮಣ್ಣಿನ ದಿಬ್ಬ ಇರುವುದು ಮುಂದಿನ ದಿನಗಳಲ್ಲಿ ಮಳೆಯ ಆರ್ಭಟ ಹೆಚ್ಚಿದರೆ ಜನರು ನೆಲೆ ಕಳೆದುಕೊಳ್ಳುವುದು ನಿಶ್ಚಿತ.
ಸೆಝ್ ಕಾಮಗಾರಿಗೆ ಗುಡ್ಡವನ್ನು ಕಡಿದು ನೆಲಸಮಗೊಳಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಹತ್ತಾರು ಬುಲ್ಡೋಜರ್ಗಳನ್ನು ಬಳಸಿ ಅವೈಜ್ಞಾನಿಕವಾಗಿ ಗುಡ್ಡ ಅಗೆಯಲಾಗುತ್ತಿರುವುದು ಪರಿಸರದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಅವರು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು.
ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಇಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಈ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸೆಝ್ ಮತ್ತು ಎಂಆರ್ಪಿಲ್ ಅಧಿಕಾರಿಗಳು ಸಮಸ್ಯೆಯತ್ತ ಗಮನಕೊಟ್ಟರೆ ಸಮಸ್ಯೆ ಬಗೆಹರಿಸುವುದು ಸುಲಭ ಎನ್ನುತ್ತಾರೆ ಬಜ್ಪೆ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಅವರು.
ಕೊಂಚಾರಿನ ಜನರು ಮಳೆಗಾಲದಲ್ಲಿ ಅನುಭವಿಸುವ ಸಮಸ್ಯೆಗಳನ್ನು ಪಟ್ಟಿ ಮಾಡಿದರೆ ಮುಗಿಯದು. ಸೆಝ್ಗೆ ಭೂಮಿ ಕಳೆದುಕೊಂಡಿರುವ ಇಲ್ಲಿನ ಮೂಲನಿವಾಸಿಗಳಲ್ಲಿ ಬಹುತೇಕ ಮಂದಿ ಒಕ್ಕಲೆದ್ದು ಬೇರೆಡೆ ವಲಸೆ ಹೋಗಿದ್ದರೆ, ಇಲ್ಲಿಯೇ ಉಳಿದಿರುವ ಮಂದಿಗೆ ಸಮಸ್ಯೆಗಳ ಮೇಲೆ ಸಮಸ್ಯೆ ಬಂದೆರಗುತ್ತಿದೆ. ಒಂದೋ ಮೂಲಸೌಕರ್ಯ ಒದಗಿಸಿ ಇಲ್ಲವೇ ನಮ್ಮ ಭೂಮಿಯನ್ನೂ ಸ್ವಾಧೀನಪಡಿಸಿ ಎನ್ನುವ ಇಲ್ಲಿನ ಜನರೂ ಕೂಡಾ ಶಾಂತಿಗುಡ್ಡೆಯ ಸಂತ್ರಸ್ತರಂತೆ ಆತಂಕದಲ್ಲೇ ದಿನ ದೂಡುತ್ತಿದ್ದಾರೆ

By suddi9

Leave a Reply

Your email address will not be published. Required fields are marked *