ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದ ತನಿಖೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿದೆ. ಇದರಿಂದ ಪಶ್ಚಿಮ ಬಂಗಾಳ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಅದರ ಜತೆಗೆ ಒಡಿಶಾ, ಅಸ್ಸಾಂ ಮತ್ತು ತ್ರಿಪುರಗಳಲ್ಲಿ ನಡೆದಿರುವ ವಿವಾದಾಸ್ಪದ ಪೊಂಝಿ ಯೋಜನೆ ವಂಚನೆಗಳ ತನಿಖೆಯನ್ನೂ ಕೋರ್ಟ್ ಸಿಬಿಐಗೇ ವಹಿಸಿದೆ.

ಶಾರದ ಚಿಟ್ ಫಂಡ್ ಹಗರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಸಂದರ್ಭದಲ್ಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದರ ವಿರುದ್ಧ ಪಶ್ಚಿಮ ಬಂಗಾಳ ಪ್ರಬಲವಾದ ವಾದ ಮಂಡಿಸಿತ್ತು. ಆದರೆ ಪ್ರಕರಣದ ತೀವ್ರತೆ ಮನಗಂಡ ಅಪೆಕ್ಸ್ ಕೋರ್ಟ್, ಶಾರದಾ ಚಿಟ್ ಫಂಡ್ ಹಗರಣದ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಹೇಳಿತು.
ಅದೇವೇಳೆ ಒಡಿಶಾದಲ್ಲಿ 44 ಚಿಟ್ ಫಂಡ್ ಕಂಪನಿಗಳ ವಿರುದ್ಧದ ಎಲ್ಲ ಪ್ರಕರಣಗಳ ತನಿಖೆ ಹೊಣೆಯನ್ನೂ ಸುಪ್ರೀಂ, ಸಿಬಿಐಗೆ ವರ್ಗಾಯಿಸಿತು. ಅಂತರ ರಾಜ್ಯ ಮಟ್ಟದಲ್ಲಿ ಹಬ್ಬಿರುವ, ಅಂತಾರಾಷ್ಟ್ರೀಯ ಕೊಂಡಿಗಳನ್ನು ಹೊಂದಿರಬಹುದಾದ ದುಡ್ಡಿನ ವ್ಯವಹಾರವನ್ನು ರಾಜ್ಯದ ಪೊಲೀಸರು ಇನ್ನೂ ಸ್ಪಷ್ಟವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಹಣದ ಜಾಲ ಪತ್ತೆ ಹಚ್ಚಲು ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯವೂ ಕೈಜೋಡಿಸಬೇಕೆಂದು ಕೇಳಿದೆ.
ಈ ರಾಜ್ಯಗಳಲ್ಲಿ ನಡೆದ ಚಿಟ್ ಫಂಡ್ ಹಗರಣಗಳಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಒಳಗೊಂಡಿರುವ ಸಾಧ್ಯತೆ ಇರುವುದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಬಯಸಿದೆ.
ಇದಕ್ಕೂ ಮುನ್ನ ಬಹುಕೋಟಿ ಶಾರದ ಚಿಟ್ ಫಂಡ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮಾಡಿದ ಮನವಿಯನ್ನು ಕೊಲ್ಕತ್ತಾ ಹೈಕೋರ್ಟ್ ಮನ್ನಿಸಿರಲಿಲ್ಲ. 2013ರ ಏಪ್ರಿಲ್ 23ರಂದು ಶಾರದಾ ಗ್ರೂಪ್ ಅಧ್ಯಕ್ಷ ಸುದೀಪ್ತ ಸೇನ್ ಹಾಗೂ ಅವರ ಇಬ್ಬರು ನಿಕಟ ಸಹವರ್ತಿಗಳ ಸಹಿತ ಕಾಶ್ಮೀರದ ಸೊನ್ಮಾರ್ಗ್‌ನಲ್ಲಿ ಬಂಧಿಸಲಾಗಿತ್ತು.
