ಬಂಟ್ವಾಳ:ತಾಲ್ಲೂಕಿನ ಮಾರಿಪಳ್ಳ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಬುಧವಾರ ಬೆಳಿಗ್ಗೆ ನಡೆದ ರೌಡಿ ಮಾದ ಹನೀಫ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಭಾನುವಾರ ಇಲ್ಲಿನ ಬಿ.ಸಿ.ರೋಡ್ ನ್ಯಾಯಾಧೀಶರ ಮನೆ ಎದುರು ಹಾಜರುಪಡಿಸಿದ್ದಾರೆ.

DSC_0662-650x433
ಆರೋಪಿಗಳನ್ನು ಸ್ಥಳೀಯ ಸುಜೀರು ನಿವಾಸಿ ಖಲಂದರ್ ಶಾಫಿ, ಅನ್ವರ್ ಸಾಹಿದ್, ಮಾರಿಪಳ್ಳ ನಿವಾಸಿ ಸಿದ್ದಿಕ್, ತುಂಬೆ ನಿವಾಸಿ ಅರಾಫತ್, ಅಡ್ಯಾರು ನಿವಾಸಿ ಇಮ್ರಾನ್, ತುಂಬೆ ನಿವಾಸಿ ನಾಸಿರ್ ಹುಸೇನ್ ಎಂದು ಗುರುತಿಸಲಾಗಿದ್ದು, ಇವರಿಗೆ ಡಿ.26ರತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಇಲ್ಲಿನ ರಿಕ್ಷಾ ಚಾಲಕ ರಿಫಾಯಿ ಹತ್ಯೆ ಪ್ರಕರಣದಲ್ಲಿ ಮಾದ ಹನೀಫ್ ಪ್ರಮುಖ ಆರೋಪಿಯಾಗಿದ್ದು, ಈಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ಇದಕ್ಕೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದ್ದು, ಇನ್ನೋರ್ವ ಆರೋಪಿ ಕಾರು ಚಾಲಕ ಸಂಶುದ್ದೀನ್ ತಲೆಮರೆಸಿಕೊಂಡಿದ್ದಾನೆ.

ಈ ಕೃತ್ಯಕ್ಕೆ ಬಳಸಿದ್ದ್ದಾರೆನ್ನಲಾದ ಮಾರುತಿ ಆಲ್ಟೊ ಕಾರು ಮತ್ತು ಎರಡು ತಲವಾರು ಇಲ್ಲಿನ ಗಾಣದಪಡ್ಪು ಸಮೀಪದ ಕಾಮಾಜೆ ರಸ್ತೆ ಗ್ಯಾರೇಜೊಂದರ ಬಳಿ ಬುಧವಾರ ಅನಾಥವಾಗಿ ಪೊಲೀಸರಿಗೆ ದೊರೆತಿದ್ದು, ಕಾರು ಚಾಲಕ ಸಂಶುದ್ದೀನ್ ಪತ್ತೆಯಾದ ಬಳಿಕ ಮತ್ತಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *