ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ರಜತ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಶಾಲಾ ಪಠ್ಯದಲ್ಲಿ ಭಾಷೆ, ಭಾವ, ಅಭಿವ್ಯಕ್ತಿ ಎನ್ನುವ ಮೂರು ದಿನಗಳ ವಿಶೇಷ ಕಾರ್ಯಗಾರ ಡಿ.16 ರಿಂದ ಡಿ.18ರವರೆಗೆ ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ವಹಿಸಲಿದ್ದಾರೆ, ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಕಾರ್ಯಗಾರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಪ್ರೆಸ್ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಭಾಗವಹಿಸಲಿದ್ದಾರೆ.
ಡಿ.18ರಂದು ಸಂಜೆ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸಮಾರೋಪ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಬಂಟ್ವಾಳ ಗ್ರಾಮೀಣ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ, ರಜತ ವರ್ಷಾ ಚರಣೆಯ ಗೌರವಾಧ್ಯಕ್ಷ ಬಾಲಕೃಷ್ಣ ಗಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಭಾಗವಹಿಸಲಿದ್ದಾರೆ. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಐಕೆ ಬೊಳುವಾರು, ಮೌನೇಶ್ ವಿಶ್ವಕರ್ಮ, ಎ.ಗೋಪಾಲ ಅಂಚನ್, ಸಿ ಆರ್ ಪಿ ಗಂಗಾಧರ್, ಮಂಜು ವಿಟ್ಲ ಹಾಗೂ ಶಿಬಿರಾಧಿಕಾರಿಯಾಗಿ ಸಂದೀಪ್ ಸಾಲ್ಯಾನ್ ಹಾಜರಿರುತ್ತಾರೆ. ಎಂದು ರಜತ ವರ್ಷಾಚರಣೆ ಸಮಿತಿಯ ಸಂಚಾಲಕರಾದ ಹರೀಶ್ ಮಾಂಬಾಡಿ ಹಾಗೂ ವೆಂಕಟೇಶ್ ಬಂಟ್ವಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
