ಮೂಡುಬಿದಿರೆ: ಸಹೋದರರ ನಡುವೆ ಪರಸ್ಪರ ಹಲ್ಲೆ ನಡೆದು, ಗಂಭೀರ ಗಾಯಗೊಂಡ ಹಿರಿಯ ಸಹೋದರ ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬುಧವಾರ ಗುತ್ತಕಾಡು ನಿವಾಸಿ ಕೂಸು ಎಂಬವರ ಹಿರಿಯ ಮಗ ಸದಾಶಿವ( 30 ) ಎಂಬವರನ್ನು ಅವರ ತಮ್ಮ ಸಹೋದರ ಮೋಹನ( 28) ಎಂಬವರು ಬುಧವಾರ ರಾತ್ರಿ ವೇಳೆ ಕೊಲೆ ಮಾಡಿದ್ದು, ಗುರುವಾರ ಸಂಜೆ ವೇಳೆಗೆ ಪೊಲೀಸರ ಗಮನಕ್ಕೆ ಬಂದಿದೆ.
ಬುಧವಾರ ರಾತ್ರಿ ಸಹೋದರರು ಪರಸ್ಪರ ಹಲ್ಲೆ ನಡೆಸಿದ್ದು, ಈ ಸಂದರ್ಭ ಮೋಹನ, ಅಣ್ಣನನ್ನು ಮಾರಕಾಯುಧದಿಂದ ತಲೆಗೆ ಹೊಡೆದಿದ್ದರು. ಗಲಾಟೆ ಬಳಿಕ ಇಬ್ಬರು ಮಲಗಲು ಹೋಗಿದ್ದರು. ಮಲಗಿದ ಸಂದರ್ಭ ಸದಾಶಿವ ಅವರ ತಲೆಯಲ್ಲಿ ರಕ್ತಸ್ರಾವವಾಗಿ ಮೃತರಾಗಿರಬಹುದೆಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
