ಬಂಟ್ವಾಳ: ತಾಲ್ಲೂಕಿನ ನಾವೂರು ಸಮೀಪದ ಹಳೆಗೇಟು ಎಂಬಲ್ಲಿ ನ.12ರಂದು ರಾತ್ರಿ ಕಿಡಿಗೇಡಿಗಳಿಂದ ಚೂರಿ ಇರಿತಕ್ಕೆ ಬಲಿಯಾದ ಹರೀಶ ಪೂಜಾರಿ ಹತ್ಯೆ ಮತ್ತು ಆತನ ಸ್ನೇಹಿತ ಶಮೀವುಲ್ಲ ಎಂಬಾತನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಕಲ್ಲಡ್ಕ ನಿವಾಸಿ ಮಿಥುನ್ ಪೂಜಾರಿ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬಂಧಿಸಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ 15ದಿನಗಳ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿಗಳು ಎನ್ನಲಾದ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ ಮತ್ತು ಆತನ ಸ್ನೇಹಿತ ಅಚ್ಚುತ ಎಂಬವರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
