ಬಂಟ್ವಾಳ: ಜಿಲ್ಲೆಯಲ್ಲಿ ಕೆಲವೊಂದು ರಾಜಕೀಯ ಪ್ರೇರಿತ ಮತ್ತು ಪೂರ್ವದ್ವೇಷದಿಂದ ಉಂಟಾಗುವ ಹಲವು ಘರ್ಷಣೆಗಳಿಗೆ ವಿವಿಧೆಡೆ ನಿಷ್ಠೆಯಿಂದ ದುಡಿದು ಜೀವಿಸುತ್ತಿರುವ ಅದೆಷ್ಟೋ ಮಂದಿ ಅಮಾಯಕ ಯುವಕರು ಬಲಿಯಾಗಿ ಅಮಾಯಕರ ಬಂಧನ ನಡೆದರೆ ಇವೆರಡು ಸಮಾನ ಖಂಡನೀಯವಾಗುತ್ತದೆ ಎಂದು ಕಾಂಗ್ರೆಸ್‍ನ ಪರಿಶಿಷ್ಟ ಘಟಕ ಮುಖಂಡ ಜನಾರ್ದನ ಚೆಂಡ್ತಿಮಾರ್ ಹೇಳಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾವೂರು ಹಳೆಗೇಟು ಎಂಬಲ್ಲಿ ಈಚೆಗೆ ನಡೆದ ಹರೀಶ ಪೂಜಾರಿ ಹತ್ಯೆ ಕೂಡಾ ರಾಜಕೀಯ ಪ್ರೇರಿತ ಮತ್ತು ಕೋಮು ಗಲಭೆಗೆ ಪೂರಕವಾಗಿದೆ ಎಂಬುದು ಇಬ್ಬರು ಆರೋಪಿಗಳ ಬಂಧನದಿಂದ ಸಾಬೀತಾಗಿದೆ ಎಂದು ಆರೋಪಿಸಿದರು. ಈ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಕೂಡಾ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಕಳೆದ 10 ವರ್ಷಗಳ ಹಿಂದೆ ಕಾವಳಮೂಡೂರು ಎಂಬಲ್ಲಿ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಹತ್ಯೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರೂ ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಈ ಸಮಾಜದಲ್ಲಿ ಬಲಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಹತ್ಯೆಗೀಡಾದರೆ ಅಂತಹ ಮನೆಗೆ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳು ದೌಡಾಯಿಸಿ ಪರಿಹಾರಧನ ವಿತರಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕೂಡಾ ಪೊಲೀಸರು ವಿಶೇಷ ಮುತುವರ್ಜಿ ವಹಿಸುತ್ತಾರೆ.
ಇನ್ನೊಂದೆಡೆ ದುರ್ಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಹತ್ಯೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಪೊಲೀಸ್ ಇಲಾಖೆಯಲ್ಲಿ ತೀರಾ ನಿರ್ಲಕ್ಷ್ಯ ಮನೋಭಾವ ಎದ್ದು ಕಾಣುತ್ತದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ ಇನ್ನಾದರೂ ಪ್ರಜ್ಞಾವಂತ ಸಮಾಜ ಎಚ್ಚೆತ್ತು ಪರಸ್ಪರ ಸೌಹಾರ್ದತೆ ಕಾಯ್ದುಕೊಳ್ಳಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮೋಹನ ಚೆಂಡ್ತಿಮಾರ್, ಸದಾನಂದ ನಾವೂರು, ರಾಜೀವ ಕಕ್ಯಪದವು ಮತ್ತಿತರರು ಇದ್ದರು.
