ಬಂಟ್ವಾಳ: ಜನಸಾಮಾನ್ಯನ ಅಗತ್ಯತೆಗಳನ್ನು ಅರಿತುಕೊಂಡು ಸಮಾಜ ಸೇವಾ ಕಾರ್ಯಗಳನ್ನು ಮಾಡಬೇಕಾದರೆ ಹೆಚ್ಚಿನ ತಾಳ್ಮೆ ಹಾಗೂ ಶ್ರಮ ಬೇಕು ಮಾತ್ರವಲ್ಲದೆ ವಿಶೇಷ ಇಚ್ಛಾಶಕ್ತಿಯೂ ಬೇಕು. ಅಂತಹ ಇಚ್ಛಶಕ್ತಿಯಿಂದಲೇ ಸೇವಾಂಜಲಿ ಪ್ರತಿಷ್ಠಾನ ಹಲವಾರು ವರ್ಷಗಳಿಂದ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಭಾಭವನದಲ್ಲಿ ನಡೆದ ಜೀವವಿಮಾ ನಿಗಮ ಪಿಂಚಣಿ ಮತ್ತು ಗುಂಪು ವಿಮಾಯೋಜನೆ ಶಾಖೆಯ ಆಮ್ಆದ್ಮಿ ಯೋಜನೆಯಡಿ ರು.4ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತೀ ಮನೆಯ ಮಕ್ಕಳ ಕಣ್ಣುಗಳು ಪ್ರಕಾಶಿಸುತ್ತಿದ್ದರೆ ಮಾತ್ರ ಆ ಮನೆ ಅಥವಾ ಕುಟುಂಬದ ಭವಿಷ್ಯ ಪ್ರಕಾಶಮಾನವಾಗಲು ಸಾಧ್ಯ ಎಂದರು. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನಾವು ನೆಮ್ಮದಿಯಿಂದ ಇರಲು ಹಾಗೂ ಮತ್ತೊಬ್ಬರನ್ನು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷನ ಪಡೆದು ಮುಂದೆ ತಮ್ಮ ತಂದೆ ತಾಯಿಗಳ ಕಣ್ಣೊರೆಸುವ ಕೆಲಸ ಮಾಡಿದಾಗ ವಿಧ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಜರಂಗಿ ಭಾಯಿಜಾನ್ ಚಲನಚಿತ್ರದ ನಿರ್ಮಾ ಪಕ ರಾಜೇಶ್ ಭಟ್ ಮಂಗಳೂರು, ಎಲ್ಐಸಿಯ ಹಿರಿಯ ವಿಭಾಗೀಯ ಅಧಿಕಾರಿ ವೈ. ವಿಶ್ವನಾಥ ಗೌಡ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಸುಬ್ರಹ್ಮಣ್ಯಂ ಕೆ., ಎಲ್ಐಸಿ ವಿಭಾಗೀಯ ಪ್ರಬಂಧಕ ಶಂಕರ್ ವಿ.ಹೆಗ್ಡೆ, ಜಿ.ಪಂ.ಮಾಜಿ ಸದಸ್ಯ ಎ.ಸಿ.ಭಂಡಾರಿ, ನರಿಕೊಂಬು ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ, ಕೈಯ್ಯೂರು ನಾರಾಯಣ ಭಟ್, ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳಬೀಡು ವಜ್ರನಾಭ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ಅರ್ಜುನ್ ಕೆ.ಪೂಂಜಾ ವಂದಿಸಿದರು. ದೇವದಾಸ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 3 ಮಂದಿ ಫಲಾನುಭವಿಗಳಿಗೆ ವಿಮಾ ಪರಿಹಾರ ಹಾಗೂ 5 ಮಂದಿ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸಕ್ಕೆ ವಿಶೇಷ ನೆರವು ನೀಡಲಾಯಿತು.
