ಬಂಟ್ವಾ:ಳ : ಇಲ್ಲಿನ ನಾವೂರ ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಪೂಜಾರಿಯ ಹತ್ಯೆ ಹಾಗೂ ಶಮೀವುಲ್ಲಾ ಎಂಬವರಿಗೆ ಚೂರಿ ಇರಿತದ ಪ್ರಕರಣವನ್ನು ಖಂಡಿಸಿರುವ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಈ ಕೃತ್ಯಕ್ಕೆ ಸಂಬಂಧಿಸಿ ಮುಂದಿನ 48 ಗಂಟೆಯೊಳಗೆ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದರವರು ಘಟನೆಗೆ ಸಂಬಂಧಿಸಿ ಯಾರ್ಯಾರೋ ಅಮಾಯಕರನ್ನು ಠಾಣೆಗೆ ತಂದೊಪ್ಪಿಸಿ ಅವರನ್ನು ಫಿಕ್ಸ್ ಮಾಡುವಂತಹ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಕಳೆದ ಹಲವು ಸಮಯದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅಮಾಯಕರ ಬಲಿಯಾಗುತ್ತಿದೆ ಇದೇ ರೀತಿ ಮುಂದುವರಿದರೆ ಜನಸಾಮಾನ್ಯರು ಬದುಕುವುದೇ ಕಷ್ಟದ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು ಈ ಘಟನೆಗೆ ಸರಕಾರವೇ ನೇರ ಹೊಣೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆ ಮತ್ತು ಕೊಲೆಯಂತಹ ಕೃತ್ಯಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾದ ಕ್ರಮ ಕೈಗೊಳ್ಳದ ನಿಟ್ಟಿನಲ್ಲಿ ಅಹಿತಕರ ಘಟನೆಗಳು ಮುಂದುವರಿಯುತ್ತಿದೆ. ಜಿಲ್ಲೆಯಲ್ಲಿ ಆಗುವಂತಹ ಈ ಅನಾಹುತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣರಾಗಿದ್ದಾರೆ ಎಂದು ಜಿ. ಆನಂದ ಆರೋಪಿಸಿದರು.
ಸಿಬಿಐಗೆ ಒಪ್ಪಿಸಿ : ಹರೀಶ್ ಪೂಜಾರಿಯ ಹತ್ಯಾ ಪ್ರಕರಣದ ತನಿಖೆ ದಾರಿ ತಪ್ಪುವ ಅನುಮಾನಗಳು ವ್ಯಕ್ತವಾಗುತ್ತಿದ್ದು ಸದ್ಯದ ಸ್ಥಿತಿಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ನ್ನು ನಂಬುವಂತಿಲ್ಲ. ಇದೀಗ ಈ ಪ್ರಕರಣವನ್ನು ತಿರುಚುವ ಹುನ್ನಾರ ನಡಿಯುತ್ತಿದೆ ಎಂದು ಆರೋಪಿಸಿದ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್ ಅವರನ್ನು ಬೇಟಿಯಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಬಿಜೆಪಿ ಕಾರ್ಯಕರ್ತನಾಗಿದ್ದ ಹರೀಶ್ ಪೂಜಾರಿ ತನ್ನ ಕುಟುಂಬದ ಆದಾರ ಸ್ಥಂಭವಾಗಿದ್ದ ತಂದೆ ಹಾಗೂ ತಾಯಿ ಅನಾರೋಗ್ಯವಾಗಿದ್ದು ತಂಗಿ ಸಣ್ಣ ಸಂಸ್ಥೆಯೊಂದರಲ್ಲಿ ನೌಕರಿ ಮಾಡಿಕೊಂಡು ಅಣ್ಣನಿಗೆ ಸಹಕಾರ ನೀಡುತ್ತಿದ್ದಳು. ಹರೀಶ್ ಹತ್ಯೆಯಿಂದಾಗಿ ಅವರ ಮನೆ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಹರೀಶ್ ಅವರ ಕುಟುಂಬದ ಮುಂದಿನ ಜೀವನ ನಿರ್ವಹಣೆ ಸಹಿತ ಎಲ್ಲಾ ಜವಾಬ್ದಾರಿಯನ್ನು ಸಂಘ ಪರಿವಾರ ವಹಿಸಲಿದೆ. ಸರಕಾರ ಹರೀಶ್ ಕುಟುಂಬಕ್ಕೆ ಕೇವಲ 5 ಲಕ್ಷ ರೂ. ಪರಿಹಾರ ನೀಡಿ ಮುಂಗೈಗೆ ಬೆಲ್ಲ ಮುಟ್ಟಿಸುವ ಬದಲು ಕನಿಷ್ಠ 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದೇ ಮೊದಲ ಬಾರಿ ಕಾಂಗ್ರೆಸಿಗರ ಭೇಟಿ : ಹಿಂದು ಯುವಕನೊಬ್ಬ ಕೊಲೆಗೀಡಾದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಈವರೆಗೂ ಅವರ ಮನೆಗೆ ಬೇಟಿ ನೀಡಿ ಸಾಂತ್ವಾನ ಹೇಳಿದ ಉದಾಹರಣೆ ಇಲ್ಲ ಆದರೆ ಹರೀಶ್ ಪೂಜಾರಿಯವರ ಹತ್ಯೆಯ ಸುದ್ದಿ ತಿಳಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ರಮಾನಾಥ ರೈಯವರ ಯಾದಿಯಾಗಿ ಕಾಂಗ್ರೆಸ್ ಶಾಸಕರು, ಮುಖಂಡರು ಅವರ ಮನೆಗೆ ಬೇಟಿ ನೀಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಾಜಿ ಶಾಸಕ ರುಕ್ಮಯ ಪೂಜಾರಿ ಆರೋಪಿಸಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತಹ ಪರಿಸ್ಥಿತಿ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು ಹರೀಶ್ ಪೂಜಾರಿ ಅವರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಯಾವುದೇ ರಾಜಿಕೀಯ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಬಂದಿಸಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ಅವರ ಕುಟುಂಬಕ್ಕೆ ಸಂಘ ಪರಿವಾರದಿಂದ ಈಗಾಗಲೇ ರೂ. 10 ಲಕ್ಷ ರೂ ಪರಿಹಾರ ಧನವನ್ನು ಒದಗಿಸಲು ನಿರ್ಧರಿಸಲಾಗಿದ್ದು ಅವರ ಉತ್ತರ ಕ್ರಿಯೆಯ ದಿನದಂದು ಈ ಸಹಾಯ ಧನವನ್ನು ಹಸ್ತಾಂತರಿಸಲಾಗುವುದು ಅವರ ಉತ್ತರ ಕ್ರಿಯೆಯ ಸಹಿತ ಎಲ್ಲಾ ಖರ್ಚು ವೆಚ್ಚಗಳನ್ನು ಸಂಘ ಪರಿವಾರವೇ ಭರಿಸಲಿದೆ ಎಂದರು.
ಸಮೀವುಲ್ಲನ ಮೇಲೆ ಮೊದಲ ದಾಳಿ : ಗುರುವಾರ ರಾತ್ರಿ ಚೂರಿ ಇರಿತಕ್ಕೊಳಗಾದ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಅಸ್ಪತ್ರೆಗೆ ಪೊಲೀಸರ ಆಗಮನದ ಮೊದಲೇ ತಾನು ಅಲ್ಲಿ ತಲುಪಿದ್ದೆ. ಈ ಸಂದರ್ಭದಲ್ಲಿ ಸಮಿವುಲ್ಲಾ ಬಂಟ್ವಾಳ ಸಿಐ ಬೆಳ್ಳಿಯಪ್ಪರವರಲ್ಲಿ ಹೇಳಿಕೆಯೊಂದನ್ನು ನೀಡಿದ್ದ ಶಮೀವುಲ್ಲಾ ಮೊದಲಿಗೆ ಮಾರುತಿ ಕಾರಿನಲ್ಲಿ ನಾಲ್ಕೈದು ಮಂದಿಯ ತಂಡ ಆಗಮಿಸಿ ಶಮೀವುಲ್ಲಾನ ಮೇಲೆ ದಾಳಿ ನಡೆಸಿತ್ತು. ಆಗ ಆತ ಹರೀಶ ನೀನು ಓಡು ಎಂದು ಹೇಳಿದ್ದ ಅಷ್ಟರಲ್ಲಿ ಆರೋಪಿಗಳು ತನ್ನನ್ನು ಬಿಟ್ಟು ಹರೀಶನ ಕತ್ತಿನ ಪಟ್ಟಿ ಹಿಡಿದು ಚೂರಿಯಿಂದ ಮನಬಂದಂತೆ ಇರಿದಿದ್ದರು ಎಂದು ಹೇಳಿಕೆ ನೀಡಿದ್ದಾನೆಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪುರಸಭಾ ಸದಸ್ಯ ಗೋವಿಂದ ಪ್ರಭುರವರು ವಿವರಿಸಿದರು. ಬಳಿಕ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರವನ್ನು ಕೂಡಾ ತಾನು ನೀಡಿದ್ದೇನೆ ಆಗಾಗಿ ಸಮೀವುಲ್ಲಾನ ಹೇಳಿಕೆಯಂತೆ ನೈಜ ಆರೋಪಿಗಳನ್ನು ಬಂಧಿಸಿ ಹರೀಶನ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಜಿ.ಪಂ. ಸದಸ್ಯ ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ, ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್, ತಾ.ಪಂ. ಸದಸ್ಯ ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.
