ಮೂಲ್ಕಿ, ಮೇ 4- ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸು ಬಳಿ ಕಾರು ಮತ್ತು ಟೆಂಪೋವೊಂದರ ನಡುವೆ ನಡೆದ ಭೀಕರ ಅಪಘಾತವೊಂದರಲ್ಲಿ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಪಡಿತರ ಸಾಮಗ್ರಿಗಳನ್ನು ತುಂಬಿಕೊಂಡು ಮೂಲ್ಕಿಯತ್ತ ಸಂಚರಿಸುತ್ತಿದ್ದ ಟೆಂಪೋಗೆ ಮುಖಾಮುಖಿ ಡಿಕ್ಕಿ ಹೊಡೆದುದರಿಂದ ಕಾರಿನಲ್ಲಿದ್ದ 13 ವರ್ಷದ ಬಾಲಕ ಮಹಮದ್ ರಿಜ್ವಾನ್ ತೀವ್ರ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರಿನಲ್ಲಿದ್ದ ಚಾಲಕ ಆಸೀಫ್ ಮಹಮದ್, ನಸೀಮ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಈ ನಡುವೆ ಟೆಂಪೋ ಚಾಲಕ ಉಡುಪಿ ಬನ್ನಂಜೆ ನಿವಾಸಿ ಹಯವದನ ಭಟ್ ಎಂಬವರ ಕಾಲಿಗೆ ತೀವ್ರ ಗಾಯಗಳಾಗಿದ್ದು ಮೂಲ್ಕಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ತೀವ್ರ ಜಖಂಗೊಂಡಿದ್ದು ಈ ಅಪಘಾತದಿಂದ ಅರ್ಧ ತಾಸು ಹೆದ್ದಾರಿ ತಡೆ ಉಂಟಾಯಿತು. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ


