ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಇದರ ವತಿಯಿಂದ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನ ಜಾಹೀರಾತು ತಡೆ ಮತ್ತು ವ್ಯಾಪಾರ ನಿಯಂತ್ರಿಸುವ ‘ಕೋಪ್ಟಾ’ ಕಾಯ್ದೆ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.
29btl-protest
ದೇಶದೆಲ್ಲೆಡೆ ಈಗಾಗಲೇ ಧೂಮಪಾನ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಇದರಿಂದಾಗಿ ಬೀಡಿ ಕೈಗಾರಿಕೋದ್ಯಮಕ್ಕೆ ಹೊಡೆತ ನೀಡಿದೆ. ಈಗಾಗಲೇ ಬೀಡಿ ಕೆಲಸ ಕಡಿಮೆಯಾಗಿ ಬೀಡಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುವ ಬದಲಾಗಿ, ಸರ್ಕಾರದ ಇಂತಹ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಮಿಕ್ಕಿ ಮಂದಿ ಬೀಡಿ ಕಾರ್ಮಿಕರು ನಿರುದ್ಯೋಗ ಭೀತಿ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ನಡುವೆ ಬೀಡಿ ಪ್ಯಾಕೆಟ್ ಮೇಲೆ ‘ಆರೋಗ್ಯಕ್ಕೆ ಹಾನಿಕರ’ ಎಚ್ಚರಿಕೆ ಬರಹ ಸಹಿತ ತಯಾರಿಕೆ ಮತ್ತು ಮಾರಾಟದ ಅವಧಿ ಮುದ್ರಿಸಿದರೆ ಬೀಡಿ ಕಂಪೆನಿ ಹೆಸರು ಮತ್ತು ಚಿತ್ರಣ ಪ್ರಕಟಿಸಲು ಅಸಾಧ್ಯವಾಗುತ್ತದೆ. ಇದರಿಂದಾಗಿ ಬೀಡಿ ಕಂಪೆನಿಗಳು ಮತ್ತಷ್ಟು ನಷ್ಟಕ್ಕೀಡಾಗಿ ಮುಚ್ಚುವ ಭೀತಿ ಎದುರಾಗಿದೆ ಎಂದು ಟೀಕಿಸಿದರು.
ಆರಂಭದಲ್ಲಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಶೆಟ್ಟಿ, ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ತಾಲ್ಲೂಕು ಘಟಕ ಅಧ್ಯಕ್ಷೆ ವಿಮಲ, ಪ್ರಮುಖರಾದ ಸಂಜೀವ ಬಂಗೇರ, ಉದಯ ಕುಮಾರ್ ಮತ್ತಿತರರು ನೇತೃತ್ವ ವಹಿಸಿದ್ದರು.

By Suddi9

Leave a Reply

Your email address will not be published. Required fields are marked *